ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಕಬ್ಬಗೆರೆ ಗೊಲ್ಲರಹಟ್ಟಿಯ ಕರಿಯಮ್ಮನಹಳ್ಳಕ್ಕೆ ನಿರ್ಮಿಸಿದ ನೂತನ ಚೆಕ್‌ಡ್ಯಾಂನ ಹಿನ್ನೀರು ರೈತರ ಜಮೀನಿಗೆ ನುಗ್ಗಿದ್ದು, ಏಳು ಎಕರೆ ಭೂಮಿಯಲ್ಲಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಹತ್ತಿ ನಾಶವಾಗಿದೆ.
ಬೆಳೆನಷ್ಟಕ್ಕೆ ಪರಿಹಾರ ನೀಡುವಂತೆ ಕೋರಿ ರೈತರು ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಗೂ ದೂರು ಸಲ್ಲಿಸಿದ್ದಾರೆ. ಬೆಳೆ ನಷ್ಟವಾಗಿ ವಾರ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕರಿಯಮ್ಮನಹಳ್ಳಕ್ಕೆ ಸುಮಾರು ₹ 80 ಲಕ್ಷ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಎಂಟು ತಿಂಗಳ ಹಿಂದೆ ನಿರ್ಮಾಣವಾದ ಚೆಕ್‌ಡ್ಯಾಂ ಈಚೆಗೆ ಸುರಿದ ಮಳೆಗೆ ಭರ್ತಿಯಾಗಿದೆ. ಚೆಕ್‌ಡ್ಯಾಂ ಹಿನ್ನೀರು ರೈತರ ಜಮೀನಿಗೂ ಚಾಚಿದೆ. ಕಾಟಲಿಂಗೇಶ್ವರ ಎಂಬುವರ ಮೂರುವರೆ ಎಕರೆ ಜಮೀನು ಹಾಗೂ ಕಲ್ಲಪ್ಪ ಎಂಬುವರ ಮೂವರೆ ಎಕರೆ ಭೂಮಿ ಸಂಪೂರ್ಣ ಮುಳುಗಡೆಯಾಗಿದೆ. ಜಮೀನಿನಲ್ಲಿ ಬಿತ್ತಿದ್ದ ಹತ್ತಿ ಹಾಗೂ ಮೆಕ್ಕೆಜೋಳ ಸಂಪೂರ್ಣ ನೀರುಪಾಲಾಗಿದೆ.
‘ಕರಿಯಮ್ಮನಹಳ್ಳ ಹರಿದು ಮುದ್ದಾಪುರ ಕೆರೆ ಸೇರುತ್ತಿತ್ತು. ಚೆಕ್‌ಡ್ಯಾಂ ನಿರ್ಮಿಸಿದ್ದರಿಂದ ಕೆರೆಗೆ ಹರಿದುಹೋಗುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜಮೀನು ಮುಳುಗಡೆಯಾಗಿದೆ. ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದು, ಆತಂಕವಾಗುತ್ತಿದೆ’ ಎಂದು ರೈತ ಕಾಟಲಿಂಗೇಶ್ವರ ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.