ADVERTISEMENT

ರೇಣುಕಸ್ವಾಮಿ ಪತ್ನಿ, ತಂದೆ–ತಾಯಿಗೆ ಧೈರ್ಯ ತುಂಬಿದ ಮುಖಂಡರು

₹1 ಕೋಟಿ ಪರಿಹಾರ ನೀಡಲು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:52 IST
Last Updated 13 ಜೂನ್ 2024, 16:52 IST
ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ರೇಣುಕಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು
ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ರೇಣುಕಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು   

ಚಿತ್ರದುರ್ಗ: ವಿವಿಧ ಮಠಗಳ ಶ್ರೀಗಳು, ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಮಾಜಗಳ ಸದಸ್ಯರು ರೇಣುಕಸ್ವಾಮಿ ತಂದೆ–ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳುವ ಪ್ರಕ್ರಿಯೆ ಗುರುವಾರವೂ ಮುಂದುವರಿಯಿತು. ಇಲ್ಲಿಯ ತುರುವನೂರು ರಸ್ತೆಯಲ್ಲಿರುವ ಅವರ ಮನೆಗೆ ಅಪಾರ ಸಂಖ್ಯೆಯ ಜನರು ಭೇಟಿ ನೀಡುತ್ತಿದ್ದು ಶೋಕದಲ್ಲಿ ಜೊತೆಯಾಗುತ್ತಿದ್ದಾರೆ.

ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಪತಿಯನ್ನು ಕಳೆದುಕೊಂಡಿರುವ ಪತ್ನಿಗೆ, ಮಗನನ್ನು ಕಳೆದುಕೊಂಡಿರುವ ತಂದೆ–ತಾಯಿಗೆ ರೇಣುಕಸ್ವಾಮಿಯನ್ನು ತಂದು ಕೊಡಲು ಸಾಧ್ಯವಿಲ್ಲ. ಹೀಗಾಗಿ ರೇಣುಕಸ್ವಾಮಿ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 1 ಕೋಟಿ ಪರಿಹಾರ ನೀಡಬೇಕು. ಜೊತೆಗೆ ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಯುವಕನನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯ‘ ಎಂದರು.

‘ತಂದೆ– ತಾಯಿ, ಪತ್ನಿಗೆ ಇಷ್ಟು ನಷ್ಟವಾಗಿದ್ದರೂ ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿ ಮೃತನ ಕುಟುಂಬದವರಿಗೆ ಕನಿಷ್ಠ ಸಾಂತ್ವನ ಹೇಳಿಲ್ಲ. ಇದರಿಂದ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂಬ ಅನುಮಾನ ಮೂಡುತ್ತದೆ. ಮನೆಯಿಂದ ಶನಿವಾರ ಕೆಲಸಕ್ಕೆಂದು ಹೋದ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದು ಶೆಡ್‌ನಲ್ಲಿ ಕೂಡಿ ಹಾಕಲಾಗಿದೆ. ಬಳಿಕ ಮನ ಬಂದಂತೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಲಾಗಿದೆ. ಆ ಸಂದರ್ಭದಲ್ಲಿ ಆತ ಎಷ್ಟೇ ಚೀರಾಡಿದರೂ ಬಿಟ್ಟಿಲ್ಲ. ಪತ್ನಿ ಗರ್ಭಿಣಿಯಾಗಿರುವ ವಿಷಯ ತಿಳಿಸಿ ಅಂಗಲಾಚಿದರೂ ಆತನನ್ನು ಬಿಟ್ಟಿಲ್ಲ’ ಎಂದರು.

ADVERTISEMENT

‘ರೇಣುಕಸ್ವಾಮಿ ಪತ್ನಿಗೆ ಇನ್ನೂ 26 ವರ್ಷ ವಯಸ್ಸು. ಚಿಕ್ಕಿವಯಸ್ಸಿನಲ್ಲಿ ಗಂಡನ ಕಳೆದುಕೊಂಡು ಅವರು ಹೇಗೆ ಬದುಕಬೇಕು? ಸುಖವಾಗಿ ಬದುಕಬೇಕಾದ ವಯಸ್ಸಿನಲ್ಲಿ ಅವರ ಜೀವನ ಹಾಳು ಮಾಡಿದ್ದಾರೆ. ಅವರ ಜೀವನಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ತಪ್ಪಿದಲ್ಲಿ ಈ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುವುದು. ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಲಾಗುವುದು. ಮೃತನ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು’ಎಂದರು.

‘ನಟ ದರ್ಶನ್‌ ಚಿತ್ರರಂಗಕ್ಕೆ ಕಳಂಕ. ಮುಂದಿನ ದಿನಗಳಲ್ಲಿ ಯಾವುದೇ ಚಿತ್ರೀಕರಣ ಮಾಡಲು ಅವಕಾಶ ನೀಡಬಾರದು. ರಾಜ್ಯ ಸರ್ಕಾರ ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆ ನೀಡಬೇಕು. ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಬಾರದು’ ಎಂದರು.

ಮುಖಂಡರಾದ ಮಲ್ಲಿಕಾರ್ಜುನ್, ನವೀನ್ ಚಾಲುಕ್ಯ, ಕಾಲುವೇಹಳ್ಳಿ ಪಾಲಯ್ಯ, ನಾಗರಾಜ್ ಬೇದ್ರೆ, ಕಿರಣ್, ಯಶವಂತ್ ಇದ್ದರು.

ಬೆಂಗಳೂರು ಪೊಲೀಸರು ಆರೋಪಿಗಳೊಂದಿಗೆ ಚಿತ್ರದುರ್ಗಕ್ಕೆ ಬರುತ್ತಾರೆ ಎಂಬ ಮಾಹಿತಿ ಇದ್ದ ಕಾರಣ ಚಳ್ಳಕೆರೆ ಗೇಟ್‌ ಬಳಿ ಅಪಾರ ಸಂಖ್ಯೆಯ ಜನರು ಸೇರಿದ್ದರು

ಸಮಾಧಿಗೆ ಹಾಲು–ತುಪ್ಪ ಸಮರ್ಪಣೆ

ರೇಣುಕಸ್ವಾಮಿ ಮೃತಪಟ್ಟು 3 ದಿನ ಕಳೆದ ಹಿನ್ನೆಲೆಯಲ್ಲಿ ಗುರುವಾರ ಸಮಾಧಿಗೆ ಕುಟುಂಬ ಸದಸ್ಯರು ಸಂಬಂಧಿಕರು ಹಾಲು– ತುಪ್ಪು ಬಿಡುವ ಸಂಪ್ರದಾಯ ನೆರವೇರಿಸಿದರು. ಈ ಸಂದರ್ಭದಲ್ಲಿ ರೆಣುಕಸ್ವಾಮಿ ಪತ್ನಿ ಸಹನಾ ತಾಯಿ ರತ್ನಪ್ರಭಾ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ವೀರಶೈವ ಜಂಗಮ ಸಂಪ್ರದಾಯದಂತೆ ಮನೆಯಲ್ಲಿ ಗುರುವಿಗೆ ಪಾದಪೂಜೆ ಮಾಡಿ ಕಳಶ ಪ್ರತಿಷ್ಠಾಪಿಸಿ ಎಡೆ ಅರ್ಪಿಸಲಾಯಿತು. ನಂತರ ಸಮಾಧಿ ಸ್ಥಳಕ್ಕೆ ತೆರಳಿ ರೇಣುಕಸ್ವಾಮಿ ಇಷ್ಟ ಪಡುತ್ತಿದ್ದ ತಿಂಡಿ ತಿನಿಸುಗಳನ್ನು ಇಟ್ಟು ಹಾಲು ತುಪ್ಪ ಬಿಟ್ಟು ಕುಟುಂಬ ಸದಸ್ಯರೆಲ್ಲರೂ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರೇಣುಕಸ್ವಾಮಿ ತಾಯಿ ‘ಎದ್ದು ಬಾ ಮಗನೇ ಒಮ್ಮೆಯಾದರೂ ಬಂದು ಅಮ್ಮಾ ಎನ್ನು ಬಾ’ ಎಂದು ಆಕ್ರಂದಿಸಿದರು. ಪತ್ನಿ ಸಹನಾ ‘ನಿಮ್ಮ ಮಗುವಿಗಾಗಿಯಾದರೂ ಬನ್ನಿ’ ಎಂದು ಅಳುವಾಗ ಸ್ಥಳದಲ್ಲಿದ್ದವರೆಲ್ಲರೂ ಕಣ್ಣೀರು ಹಾಕಿದರು.

ಮಹಜರು: ಸೇರಿದ ಅಪಾರ ಜನಸ್ತೋಮ

ಗುರುವಾರ ಬೆಂಗಳೂರು ಪೊಲೀಸರು ದರ್ಶನ್‌ ತೂಗುದೀಪ ಸೇನಾ ಅಧ್ಯಕ್ಷ ರಾಘವೇಂದ್ರ ಸೇರಿದಂತೆ ಇತರ ಆರೋಪಿಗಳನ್ನು ಕರೆದುತಂದು ಮಹಜರು ಮಾಡುತ್ತಾರೆ ಎಂಬ ಮಾಹಿತಿ ಇದ್ದ ಕಾರಣ ಸಾವಿರಾರು ಜನರು ಇಲ್ಲಿಯ ಚಳ್ಳಕೆರೆ ಗೇಟ್‌ ಬಳಿ ಸೇರಿದ್ದರು. ಸ್ಥಳೀಯ ಪೊಲೀಸರು ಸುತ್ತಮುತ್ತಲಿನ ಸ್ಥಳಕ್ಕೆ ಭದ್ರತೆ ನೀಡಿದ್ದರು. ಹೆದ್ದಾರಿ ಮೇಲ್ಭಾಗದಲ್ಲಿ ರಸ್ತೆ ಬದಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ ರಾತ್ರಿವರೆಗೂ ಪೊಲೀಸರು ಬರಲಿಲ್ಲ. ಶುಕ್ರವಾರ ಮಹಜರು ನಡೆಯಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.