ADVERTISEMENT

ಕನಸು ಕಾಣುವುದು ಬಿಟ್ಟು ಪ್ರಾಕ್ಟಿಕಲ್ ಆಗಿ ಯೋಚಿಸಿ

ಶಿಕ್ಷಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 12:08 IST
Last Updated 13 ಜುಲೈ 2018, 12:08 IST
ಹಿರಿಯೂರು ತಾಲ್ಲೂಕಿನ ಹೊಸ ಯಳನಾಡು ಗ್ರಾಮದ ಸರ್ಕಾರಿ ಪಿಯು ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರು ಶಿಕ್ಷಕಿಯೊಬ್ಬರ ಜತೆ ಮಾತುಕತೆ ನಡೆಸಿದರು.
ಹಿರಿಯೂರು ತಾಲ್ಲೂಕಿನ ಹೊಸ ಯಳನಾಡು ಗ್ರಾಮದ ಸರ್ಕಾರಿ ಪಿಯು ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರು ಶಿಕ್ಷಕಿಯೊಬ್ಬರ ಜತೆ ಮಾತುಕತೆ ನಡೆಸಿದರು.   

ಹಿರಿಯೂರು: ಶಿಕ್ಷಕರು ಕನಸು ಕಾಣುವುದನ್ನು ಬಿಟ್ಟು ಪ್ರಾಕ್ಟಿಕಲ್ ಆಗಿ ಯೋಚಿಸಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಸಲಹೆ ನೀಡಿದರು.

ತಾಲ್ಲೂಕಿನ ಹೊಸ ಯಳನಾಡು ಗ್ರಾಮದ ಸರ್ಕಾರಿ ಪಿಯು ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

‘ಪ್ರತಿದಿನ ರಾತ್ರಿ ಮಲಗುವ ಮೊದಲು ನಾಳೆ ತರಗತಿಯಲ್ಲಿ ನಾನು ಏನು ಬೋಧನೆ ಮಾಡಬೇಕು ಎಂಬ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಶಿಕ್ಷಕರು ಕಡ್ಡಾಯವಾಗಿ ಶಿಸ್ತು ಪಾಲನೆ ಮಾಡಿದಲ್ಲಿ ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ. ಇದನ್ನು ಸದುಪಯೋಗ ಮಾಡಿಕೊಂಡಲ್ಲಿ ನಮ್ಮ ನಾಳೆ ಸುಂದರವಾಗಿರುತ್ತದೆ’ ಎಂದು ಹೇಳಿದರು.

ADVERTISEMENT

ಒಂದು ಶಾಲೆಯ ಅಳಿವು–ಉಳಿವು, ಏಳಿಗೆ–ವಿನಾಶ ಎಲ್ಲವೂ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಬದ್ಧತೆ ತೋರಿ ಮಕ್ಕಳಲ್ಲಿನ ಜಾಣ್ಮೆಯನ್ನು ಗುರುತಿಸಿ, ಅವರ ಶ್ರೇಯಸ್ಸಿಗೆ ಶ್ರಮಿಸಬೇಕು ಎಂದರು. ರಾಜ್ಯದಲ್ಲಿ ಹಲವು ಗುಣಮಟ್ಟದ ಶಾಲೆಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಹೆಚ್ಚು ಗಮನ ಸೆಳೆದಿದ್ದು ಈ ಶಾಲೆ. ಸಾರ್ವಜನಿಕರ ಸಹಭಾಗಿತ್ವ ದೊರೆತರೆ ಒಂದು ಸರ್ಕಾರಿ ಶಾಲೆಯನ್ನು ಹೇಗೆಲ್ಲಾ ಅಭಿವೃದ್ಧಿಪಡಿಸಲು ಸಾಧ್ಯ ಎಂಬುದನ್ನು ಇಲ್ಲಿ ನೋಡಬಹುದು. ಇಷ್ಟೆಲ್ಲ ಸೌಲಭ್ಯಗಳಿದ್ದಾಗ ಶಿಕ್ಷಕರು ಅದಕ್ಕ ತಕ್ಕಂತೆ ತಮ್ಮನ್ನು ಬೋಧನೆಗೆ ಅರ್ಪಿಸಿಕೊಳ್ಳಬೇಕು. ಕಂಪ್ಯೂಟರ್‌ನ ಸ್ಮರಣೆಗೆ ಮಿತಿ ಇದೆ. ಆದರೆ ನಮ್ಮ ಬುದ್ಧಿ, ಮಿದುಳಿಗೆ ಮಿತಿ ಎನ್ನುವುದು ಇಲ್ಲ. ಮಿದುಳಿಗೆ ಕೆಲಸ ಕೊಟ್ಟು ದುಡಿದರೆ ಮಕ್ಕಳಿಗೆ ಒಳಿತಾಗುತ್ತದೆ. ಇದರಿಂದ ಪೋಷಕರಿಗೆ, ಸಮಾಜಕ್ಕೆ, ದೇಶಕ್ಕೆ ಒಳಿತಾಗುತ್ತದೆ’ ಎಂದು ಅವರು ಸಲಹೆ ನೀಡಿದರು.

ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ನಾ. ತಿಪ್ಪೇಸ್ವಾಮಿ ಮಾತನಾಡಿ, ‘ಗ್ರಾಮಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯಲ್ಲಿ 32 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಪ್ರಯೋಗಶಾಲೆ, ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಶಿಕ್ಷಣದ ಮೂಲಕ ಇಡೀ ಗ್ರಾಮವನ್ನು ಸಂಸ್ಕಾರದ ಕೇಂದ್ರವನ್ನಾಗಿಸಬೇಕೆಂಬುದು ಎಲ್ಲರ ಬಯಕೆ. ನಮ್ಮ ಶಾಲೆ ಸಾಮಾಜಿಕ ಪರಿವರ್ತನೆಗೆ ಕಾರಣೀಭೂತವಾಗಬೇಕು. ಸರ್ಕಾರದಿಂದ ಏನನ್ನೂ ಕೇಳದೆ ಒಂದು ಶಾಲೆಯನ್ನು ಅಭಿವೃದ್ಧಿಪಡಿಸುವುದು ಕಷ್ಟವಲ್ಲ ಎಂಬುದನ್ನು ನಮ್ಮೂರಿನವರು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಆರ್. ಗುರುಸ್ವಾಮಿ ಶಾಲೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಿಮ್ಮಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಚಂದ್ರಯ್ಯ ಸ್ವಾಗತಿಸಿದರು. ವೀರಣ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.