ADVERTISEMENT

ದೇಶದ ಕೀರ್ತಿ ವಿಶ್ವದಾದ್ಯಂತ ಬೆಳಗಬೇಕು

ಕಾನೂನು ಅರಿವು-ನೆರವು ಕಾರ್ಯಗಾರದಲ್ಲಿ ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಮನುಗೂಳಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 13:31 IST
Last Updated 12 ಜನವರಿ 2021, 13:31 IST
ಚಿತ್ರದುರ್ಗದಲ್ಲಿ ಮಂಗಳವಾರ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಗಾರವನ್ನು ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಮನುಗೂಳಿ ಅವರು ಉದ್ಘಾಟಿಸಿದರು
ಚಿತ್ರದುರ್ಗದಲ್ಲಿ ಮಂಗಳವಾರ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಗಾರವನ್ನು ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಮನುಗೂಳಿ ಅವರು ಉದ್ಘಾಟಿಸಿದರು   

ಚಿತ್ರದುರ್ಗ: ‘ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಇದು ನಮಗೆ ಬಹುದೊಡ್ಡ ಶಕ್ತಿಯೂ ಹೌದು. ಆದ್ದರಿಂದ ವಿದ್ಯಾರ್ಥಿ ಯುವಸಮೂಹ ದೇಶದ ಕೀರ್ತಿಯನ್ನು ವಿಶ್ವದಾದ್ಯಂತ ಬೆಳಗಿಸಲು ಮುಂದಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಪ್ರೇಮಾವತಿ ಮನುಗೂಳಿ ಸಲಹೆ ನೀಡಿದರು.

ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ‘ರಾಷ್ಟ್ರೀಯ ಯುವ ದಿನಾಚರಣೆ’ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾಮಿ ವಿವೇಕಾನಂದರು ಯುವಸಮೂಹಕ್ಕೆ ಎಂದೆಂದಿಗೂ ಸ್ಫೂರ್ತಿಯಾಗಿದ್ದಾರೆ. ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದೇಶವನ್ನು ಮತ್ತಷ್ಟು ಸದೃಢವಾಗಿ ಕಟ್ಟಲು ಸಾಧ್ಯವಿದೆ. ರಾಷ್ಟ್ರಸೇವೆ ಮಾಡಬೇಕೆಂಬ ಸಂಕಲ್ಪ ತೊಟ್ಟು ಶ್ರಮಿಸಿ’ ಎಂದರು.

ADVERTISEMENT

‘ದೇಶದ ಸಂವಿಧಾನದಡಿ ಎಲ್ಲರಿಗೂ ಹಕ್ಕುಗಳನ್ನು ನೀಡಲಾಗಿದೆ. ಅದೇ ರೀತಿ ಕರ್ತವ್ಯಗಳ ಕುರಿತು ಉಲ್ಲೇಖವಿದೆ. ಜವಾಬ್ದಾರಿ ಅರಿತು ಕಾನೂನಿನ ಅರಿವು ಮೂಡಿಸಿಕೊಂಡರೆ ದುಷ್ಕೃತ್ಯಗಳನ್ನು ನಿರ್ಮೂಲನೆ ಮಾಡಬಹುದು. ಸಾರ್ವಜನಿಕ ಆಸ್ತಿ ಕಾಪಾಡಬೇಕಾದ್ದು, ಎಲ್ಲರ ಕರ್ತವ್ಯವಾಗಿದೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ, ‘ವಿವೇಕಾನಂದರು ಹೇಳಿದಂತೆ ಯಾವುದೇ ವ್ಯಕ್ತಿ ತನ್ನೊಳಗಿರುವ ಪ್ರತಿಭೆ, ಸಾಮರ್ಥ್ಯ, ಬುದ್ಧಿವಂತಿಕೆ ಪ್ರದರ್ಶಿಸುವುದೇ ಶಿಕ್ಷಣವಾಗಿದೆ. ಅದೇ ರೀತಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಎಂತಹ ಶಿಕ್ಷಣ ಪಡೆದರು ಅದು ಪೂರ್ಣವಾಗುವುದಿಲ್ಲ. ಹಲವು ವಿಷಯಗಳಲ್ಲಿ ತಜ್ಞರಾದಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ವಕೀಲ ಎನ್.ಬಿ.ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಕೆ.ರಂಗಸ್ವಾಮಿ, ಐಕ್ಯುಎಸಿಯ ಡಾ.ರಮೇಶ್ ರಟಗೇರಿ, ವಕೀಲ ಸಂಘದ ಅಧ್ಯಕ್ಷ ಎಸ್.ವಿಜಯ್‍ಕುಮಾರ್, ಉಪಾಧ್ಯಕ್ಷ ಟಿ.ನಾಗೇಂದ್ರಪ್ಪ, ವಕೀಲ ಎಚ್.ಬಿ.ದೇವಿಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.