ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ): ಇಲ್ಲಿನ ಒಂಟಿಕಂಬದ ಮಠದಲ್ಲಿ ಗುರುವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಿಂದೂ ಧರ್ಮ ಕುರಿತಂತೆ ಆಡಿದ ಮಾತುಗಳು ಸಭಿಕರಲ್ಲಿ ಗೊಂದಲ ಮೂಡಿಸಿದವು.
ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ‘ಹಿಂದೂ ಎಂಬುದು ಒಂದರ್ಥದಲ್ಲಿ ಧರ್ಮವೇ ಅಲ್ಲ, ಅದು ಎಲ್ಲಾ ರೀತಿಯ ಅನಿಷ್ಠ, ಅನಾಚಾರಗಳನ್ನು ಒಳಗೊಂಡಿದೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂಬುದನ್ನು ಅರಿಯಬೇಕು. ನಾವು ಸ್ವತಂತ್ರ ಲಿಂಗಾಯತ ಧರ್ಮದವರು’ ಎಂದರು.
‘ವೇದ ಪುರಾಣ, ಶಾಸ್ತ್ರ ಪ್ರಸಾರ ಮಾಡುವ ಕಾಲದಲ್ಲಿ ಶರಣರು ವೇದಗಳನ್ನು ತಿರಸ್ಕಾರ ಮಾಡಿದ್ದರು. ವೇದವೆಂಬುದು ಓದಿನ ಮಾತು, ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸಂಖ್ಯೆಯ ಸುದ್ದಿ ಎನ್ನುವ ಮೂಲಕ ಬಸವಾದಿ ಶರಣರು ಲಿಂಗಾಯತರ ಹುಟ್ಟಿಗೆ ಕಾರಣಕರ್ತರಾದರು. ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ತುಂಬಿಕೊಂಡಿವೆ’ ಎಂದರು.
ಪಂಡಿತಾರಾಧ್ಯ ಶ್ರೀಗಳಿಗೆ ತಿರುಗೇಟು ನೀಡುವಂತೆ ಮಾತನಾಡಿದ ವಚನಾನಂದ ಸ್ವಾಮೀಜಿ ‘ಹಿಂದೂ ಎಂಬುದು ಅತ್ಯಂತ ಸತ್ಯ ಹಾಗೂ ಸನಾತನವಾದುದು, ಅದೊಂದು ವಿಶಾಲ ಮಹಾ ಸಾಗರ. ಅಲ್ಲಿ ಕೇವಲ ವೈದಿಕರು ಮಾತ್ರ ಇಲ್ಲ, ದ್ವೈತ, ಅದ್ವೈತ ಅಷ್ಟೇ ಅಲ್ಲ. ಅದು ಸರ್ವವನ್ನು, ಸರ್ವರನ್ನೂ ಒಳಗೊಂಡಿರುವಂಥದ್ದು. ಎಲ್ಲಾ ಮೂಲ ಪುರುಷರು ಇದ್ದುದು ಹಿಂದೂ ಧರ್ಮದಲ್ಲಿ’ ಎಂದರು.
‘ವೀರಶೈವ, ಲಿಂಗಾಯತ ತತ್ವಗಳು ಬೇರೆ ಬೇರೆ ಇರಬಹುದು. ನಿಮ್ಮ ಮಠ, ಪೀಠಗಳ ತತ್ವ ಏನೇ ಇರಬಹುದು. ಆದರೆ ನಾವೆಲ್ಲಾ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ. ಹಿಂದೂ ಧರ್ಮದ ಬಗ್ಗೆ ಹೆಚ್ಚು ಜ್ಞಾನ ಇಲ್ಲದವರು ಅಧ್ಯಯನ ಮಾಡಬೇಕು’ ಎಂದರು.
ವಚನಾನಂದ ಶ್ರೀಗಳ ಮಾತಿಗೆ ಭಕ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ‘ನೀವೇಕೆ ಪಂಡಿತಾರಾದ್ಯ ಶ್ರೀಗಳ ವಿರುದ್ಧ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿದರು. ಸಂಘಟಕರು ಅವರನ್ನು ಸಮಾಧಾನಪಡಿಸಿ ಕೂರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.