ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೇಳಿದರೂ ಕೋಲಾರಕ್ಕೆ ಹೋಗುವುದಿಲ್ಲ. ಚಿತ್ರದುರ್ಗ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
‘2019ರ ಲೋಕಸಭಾ ಚುನಾವಣೆಗೆ ಚಿತ್ರದುರ್ಗಕ್ಕೆ ಬಂದಾಗ ಎಲ್ಲರಿಗೂ ನನ್ನ ಮುಖ ನೋಡಲು ಕೂಡ ಸಾಧ್ಯವಾಗಲಿಲ್ಲ. ಆದರೂ, ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡಿದರು. ಈ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ’ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಚುನಾವಣೆ ಎಂಬುದು ಹಣ ಮಾಡುವ ವ್ಯವಸ್ಥೆಯಾಗುತ್ತಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರತಿನಿಧಿಗೆ ರಾಜನ ಮನಸ್ಥಿತಿ ಬರುತ್ತಿರುವುದು ವಿಪರ್ಯಾಸ. ಮತದಾರರು ಸೌಲಭ್ಯಗಳನ್ನು ಭಿಕ್ಷೆಯ ರೂಪದಲ್ಲಿ ಅಂಗಲಾಚುವ ಸ್ಥಿತಿ ನಿರ್ಮಾಣವಾಗುತ್ತಿದೆ. ರಾಜಕಾರಣಿಗಳು ಎಲ್ಲದನ್ನೂ ಲಾಭದ ದೃಷ್ಟಿಯಿಂದ ನೋಡುತ್ತಿದ್ದಾರೆ. ಹೀಗಾಗಿ, ರಾಜಕಾರಣದ ಬಗ್ಗೆ ಬೇಸರ ಮೂಡಿದೆ’ ಎಂದು ಹೇಳಿದರು.
‘ಸ್ಥಳೀಯ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಬೇಕು ಎಂಬ ಕೂಗು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇದಕ್ಕೆ ನನ್ನ ವಿರೋಧವಿಲ್ಲ. ಮತದಾರರ ಈ ಪ್ರಜ್ಞಾವಂತಿಕೆಯನ್ನು ಸ್ವೀಕರಿಸುತ್ತಿವೆ. ಇಂತಹ ಚಳವಳಿಯನ್ನು ಗೌರವದಿಂದ ಕಾಣುತ್ತೇನೆ. ಮತ್ತೊಬ್ಬರ ಮೇಲೆ ಸವಾರಿ ಮಾಡಿ ಅಧಿಕಾರ ಹಿಡಿಯುವ ಮನಸ್ಥಿತಿ ನನ್ನದಲ್ಲ. ಸ್ಥಳೀಯರಿಗೆ ಪಕ್ಷ ಅವಕಾಶ ನೀಡಿದರೆ ಬೆಂಬಲಿಸುತ್ತೇನೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ಸಾಧಿಸುವುದಷ್ಟೇ ಮುಖ್ಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವವರು ಚುನಾವಣೆಗೆ ಸ್ಪರ್ಧಿಸಬೇಕು. ವ್ಯವಹಾರಕ್ಕೆ ರಾಜಕಾರಣ ಬಳಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸುವುದು ತಪ್ಪು.–ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.