ADVERTISEMENT

2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ: ಮಾಜಿ ಸಚಿವ ಗೂಳಿಹಟ್ಟಿ

ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:18 IST
Last Updated 3 ಏಪ್ರಿಲ್ 2024, 15:18 IST
ಹೊಸದುರ್ಗದಲ್ಲಿ ಆಯೋಜಿಸಿದ್ದ ಗೂಳಿಹಟ್ಟಿ ಡಿ. ಶೇಖರ್‌ ಕಾರ್ಯಕರ್ತರ ಪುನರ್‌ ಸಮ್ಮಿಲನ ಸಭೆಯಲ್ಲಿ ಭಾಗವಹಿಸಿದ್ದ ಜನ
ಹೊಸದುರ್ಗದಲ್ಲಿ ಆಯೋಜಿಸಿದ್ದ ಗೂಳಿಹಟ್ಟಿ ಡಿ. ಶೇಖರ್‌ ಕಾರ್ಯಕರ್ತರ ಪುನರ್‌ ಸಮ್ಮಿಲನ ಸಭೆಯಲ್ಲಿ ಭಾಗವಹಿಸಿದ್ದ ಜನ    

ಹೊಸದುರ್ಗ: ‌‘2008ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಾಲ್ಲೂಕಿನ ಜನತೆ ಸಹಕಾರ ಬಹಳಷ್ಟಿತ್ತು. ಪುನಃ ಸಂಘಟನೆ ಬಲಗೊಳಿಸಿ, ಅಂದಿನ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುವೆ. 2028ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ’ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್‌ ಕಾರ್ಯಕರ್ತರಿಗೆ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ‘ಗೂಳಿಹಟ್ಟಿ ಡಿ. ಶೇಖರ್‌ ಅವರಿಗೆ 2008ರಿಂದಲೂ ಬೆಂಬಲಕ್ಕೆ ನಿಂತು ಶ್ರಮಿಸಿದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಪುನರ್‌ ಸಮ್ಮಿಲನ ಸಭೆ’ಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ನಂತರ ಬಿಜೆಪಿಗೆ ಸೇರಿದೆ. ಅಂದು ನನ್ನಿಂದಾಗಿ ಬಿ.ಎಸ್.‌ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ನಾನು ಮಂತ್ರಿಯಾದ ಅವಧಿಯಲ್ಲಿ ನನ್ನಿಂದ ಒಬ್ಬ ಪೋಲಿಸ್‌ ಸಬ್‌ಇನ್‌ಸ್ಪೆಕ್ಟರ್‌ ವರ್ಗಾವಣೆಯನ್ನು ಮಾಡಿಸಲಾಗಲಿಲ್ಲ. ‘ಆಪರೇಷನ್‌ ಕಮಲ’ದಲ್ಲಿ ಸ್ವಜಾತಿಯವರು ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹಿಂದುಳಿದ ವರ್ಗದವರು ಬೇಕು’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳಿದ್ದಾರೆ. ಕಾರ್ಯಕರ್ತರು ಸೂಚಿಸಿದ ವ್ಯಕ್ತಿಗೆ ಅಥವಾ ತಾವು ಸೂಚಿಸಿದ ವ್ಯಕ್ತಿಗೆ ಎಲ್ಲರೂ ಸಹಕಾರ ನೀಡೋಣ. ಮತ್ತೊಮ್ಮೆ ಸಭೆ ಕರೆದು, ನಮ್ಮ ಬೆಂಬಲ ಯಾರಿಗೆ ಎಂಬುದನ್ನು ನಿರ್ಧರಿಸೋಣ. ಇನ್ಮುಂದೆ ಹೊಸದುರ್ಗದಲ್ಲೆ ಇರುತ್ತೇನೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಎದುರಿಸೋಣ. ಎಲ್ಲ ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತ. ಕಾರ್ಯಕರ್ತರಿಗೆ ಯಾವುದೇ ದೌರ್ಜನ್ಯವಾದರೂ ಸದಾ ನಿಮ್ಮ ಪರವಾಗಿರುತ್ತೇನೆ. ಈ ಬಗ್ಗೆ ಗೊಂದಲ ಬೇಡ’ ಎಂದು ಸ್ಪಷ್ಟನೆ ನೀಡಿದರು.

ಜನರ ಆಕ್ರೋಶ: ‘ತಾಲ್ಲೂಕಿಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತೀರಾ. ನಮ್ಮ ಕಷ್ಟಗಳಿಗೆ ಸ್ಪಂದಿಸುವವರಿಲ್ಲ. ನೀವು ಇಲ್ಲೇ ಇದ್ದು ನಿರ್ಧಾರಗಳಿಗೆ ಬದ್ಧರಾದರೆ, ನಾವು ಬೆಂಬಲ ಸೂಚಿಸುತ್ತೇವೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ನೀವು ಪಕ್ಷೇತರರಾಗಿ ನಿಂತು ಮತ ಕೇಳಿದ್ದರೂ ನಾವು ಹಾಕುತ್ತಿದ್ದೆವು. ಮತ್ತೊಬ್ಬರಿಗೆ ಮತ ಹಾಕುವಂತೆ ಹೇಳಿಕೆ ನೀಡಬಾರದಿತ್ತು’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯರಾದ ಎಂ.ಶ್ರೀನಿವಾಸ, ಕೆ.ಎಲ್.‌ನಾಗರಾಜ್‌, ಮುಖಂಡರಾದ ಹೇರೂರು ಮಂಜುನಾಥ್‌, ಶ್ರೀಧರ್‌ ಭಟ್‌ ಸೇರಿ ಗೂಳಿಹಟ್ಟಿ ಅಭಿಮಾನಿಗಳಿದ್ದರು.

ಹೊಸದುರ್ಗದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಪುನರ್‌ ಸಮ್ಮಿಲನ ಸಭೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್‌ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.