ADVERTISEMENT

ಚಿತ್ರದುರ್ಗ: ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕಾಂಗ್ರೆಸ್‌–ಬಿಜೆಪಿ

ಬಿ.ಎನ್‌.ಚಂದ್ರಪ್ಪ, ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಇಂದು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 0:19 IST
Last Updated 4 ಏಪ್ರಿಲ್ 2024, 0:19 IST
   

ಚಿತ್ರದುರ್ಗ: ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಗುರುವಾರ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಚುನಾವಣಾ ಕಣ ರಂಗೇರಲಿದ್ದು, ಶಕ್ತಿ ಪ್ರದರ್ಶನಕ್ಕೆ ಎರಡು ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಎನ್‌.ಚಂದ್ರಪ್ಪ ಹಾಗೂ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಗೋವಿಂದ ಎಂ.ಕಾರಜೋಳ ಕಣಕ್ಕೆ ಇಳಿಯಲಿದ್ದಾರೆ. ಕಾರಜೋಳ ಅವರು ಏ.1ರಂದು ಎರಡು ಪ್ರತಿ ನಾಮಪತ್ರಗಳನ್ನು ಸಲ್ಲಿಸಿದ್ದು, ಗುರುವಾರ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ.

ಪ್ರಜಾಧ್ವನಿ–2 ಸಮಾವೇಶ: ಉಮೇದುವಾರಿಕೆ ಸಲ್ಲಿಕೆಯ ದಿನವೇ ಕಾಂಗ್ರೆಸ್‌ ‘ಪ್ರಜಾಧ್ವನಿ–2’ ಸಮಾವೇಶವನ್ನು ಹಮ್ಮಿಕೊಂಡಿದೆ. ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಗವಹಿಸಲಿದ್ದಾರೆ.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಅವರು ಬೆಳಿಗ್ಗೆ 10 ಗಂಟೆಗೆ ನಗರದ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನೀಲಕಂಠೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭವಾಗಲಿದೆ. ಗಾಂಧಿ ವೃತ್ತ, ಬಿ.ಡಿ ರಸ್ತೆಯ ಮೂಲಕ ಸಾಗುವ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಬೆಳಿಗ್ಗೆ 11.30ಕ್ಕೆ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ.

ಬೆಳಿಗ್ಗೆ 11.45ರಿಂದ ಮಧ್ಯಾಹ್ನ 2ರವರೆಗೆ ‘ಪ್ರಜಾಧ್ವನಿ–2’ ಸಮಾವೇಶ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಸೇರಿದಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು, ಕಾಂಗ್ರೆಸ್‌ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಕಮಲ ಪಡೆಯ ರೋಡ್‌ಶೋ: ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಬಿಜೆಪಿ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ. ಕಾಂಗ್ರೆಸ್‌ ಸಮಾವೇಶಕ್ಕೆ ಪರ್ಯಾಯವಾಗಿ ಭರ್ಜರಿ ರೋಡ್‌ಶೋ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೇರಿ ಅನೇಕರು ಪಾಲ್ಗೊಳ್ಳದ್ದಾರೆ.

ನಗರದ ಕನಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್‌ಶೋ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11.30ಕ್ಕೆ ರೋಡ್‌ಶೋ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಮಾರ್ಗ ಮಧ್ಯದ ನೀಲಕಂಠೇಶ್ವರ ದೇವಾಲಯದಲ್ಲಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಪೂಜೆ ಸಲ್ಲಿಸಲಿದ್ದಾರೆ.

ಮಾಜಿ ಸಚಿವ ಮಾಧುಸ್ವಾಮಿ, ಬಿ.ಶ್ರೀರಾಮುಲು, ಮಾಧುಸ್ವಾಮಿ, ಶಾಸಕರಾದ ಜಿ.ಜನಾರ್ಧನ ರೆಡ್ಡಿ, ಎಂ. ಚಂದ್ರಪ್ಪ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.