ಹಿರಿಯೂರು: ನಗರದ ರಾಷ್ಟ್ರೀಯ ಹೆದ್ದಾರಿ–4ರ ಬೈಪಾಸ್‌ನಲ್ಲಿ ಆಲೂರು ಕ್ರಾಸ್ ಸಮೀಪ ಸೋಮವಾರ ಮುಂಜಾನೆ ಈರುಳ್ಳಿ ಸಾಗಿಸುತ್ತಿದ್ದ ಲಾರಿಯ ಟೈರ್ ಸಿಡಿದು ಉರುಳಿ ಬಿದ್ದಾಗ ಈರುಳ್ಳಿ ಚೀಲದಡಿ ಸಿಲುಕಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆಯ ಹುಯಿಲಗೋಳದ ರೈತರಾದ ಪ್ರಶಾಂತ್ ಹಟ್ಟಿ (36), ಗುರಪ್ಪ ಈರಪ್ಪ ಹೂಗಾರ (30) ಹಾಗೂ ರಮೇಶ ಅಲಿಯಾಸ್ ರಾಮನಗೌಡ ಪಾಟೀಲ, (26) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುರೇಶ ಕಳಕಪ್ಪ ಹುನುಗುಂದಿ (30) ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹುಯಿಲಗೋಳದ ಸಂಗಪ್ಪ ತಿಪ್ಪಣ್ಣ ಹಂಚಿನಾಳ್ ಹಾಗೂ ಮಧುಗಿರಿ ತಾಲ್ಲೂಕಿನ ಗಿರಿಯನಪಾಳ್ಯದ ಲಾರಿ ಕ್ಲೀನರ್ ಆನಂದ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಹುಬ್ಬಳ್ಳಿ ಹಾಗೂ ಗದಗ ಮಾರ್ಕೆಟ್‌ಗಳಲ್ಲಿ ದಲ್ಲಾಳಿಗಳು ಹೆಚ್ಚು ವಸೂಲಿ ಮಾಡುತ್ತಾರೆ. ಬೆಂಗಳೂರಿನಲ್ಲಿ ದಲ್ಲಾಳಿಗಳು ಇರುವುದಿಲ್ಲ. ನಾಲ್ಕು ಕಾಸು ಹೆಚ್ಚು ಸಿಗುತ್ತದೆ’ ಎಂದು ರೈತರು ಈರುಳ್ಳಿಯನ್ನು ಒಯ್ಯುತ್ತಿದ್ದರು. ನಾಲ್ವರೂ ಲಾರಿಯ ಮೇಲ್ಭಾಗದಲ್ಲಿ ಮಲಗಿದ್ದರು. ಲಾರಿಯ ಟೈರ್ ಸಿಡಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.