ADVERTISEMENT

ಮಾದಿಗರಿಗೆ ಸಿಗದ ಉನ್ನತ ಹುದ್ದೆ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 20:27 IST
Last Updated 29 ಅಕ್ಟೋಬರ್ 2023, 20:27 IST
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ   

ಚಿತ್ರದುರ್ಗ: ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಸಮುದಾಯದ ಒಬ್ಬರಿಗೂ ಉನ್ನತ ಹುದ್ದೆ ನೀಡಿಲ್ಲ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯದ ಅಧಿಕಾರಿಗಳ ಸಂಖ್ಯೆಯೂ  ಕಡಿಮೆಯಿದೆ. ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯದ ಅಧಿಕಾರಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಸಮುದಾಯದ ಅಧಿಕಾರಿಗಳಿಗೆ ಉನ್ನತ ಹುದ್ದೆಗಳ ಕುರಿತು ಸಂಬಂಧಿಸಿದ ಸಚಿವರು ಗಮನ ಹರಿಸಬೇಕು’ ಎಂದರು.

ADVERTISEMENT

‘ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಮೂರು ದಶಕಗಳಿಂದ ಒಳ ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಮಕ್ಕಳು ವಿಶೇಷ ಕಾಳಜಿವಹಿಸಿ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಅಲ್ಲಿಯವರೆಗೂ ಬದಲಾವಣೆ ಸಾಧ್ಯವಿಲ್ಲ’ ಎಂದು ಸ್ವಾಮೀಜಿ ಹೇಳಿದರು.

‘ನಾನೂ ಮಾದಿಗ, ಮಾನವತಾವಾದಿ’: ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ‘ನಾನು ಪಕ್ಕಾ ಮಾದಿಗ ಹಾಗೂ ಮಾನವತಾವಾದಿ. ನಾನು ಮಾದಿಗನಲ್ಲ ಎಂಬುದು ನಿರೂಪಿತವಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.