ಹಿರಿಯೂರು: ಮಹಾ ಶಿವರಾತ್ರಿ ಪ್ರಯುಕ್ತ ನಗರದ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಭಕ್ತರ ದಂಡು ನೆರೆದಿತ್ತು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ದೇವಸ್ಥಾನ ಸಮಿತಿಯವರು ಗರ್ಭಗುಡಿಯ ಬಾಗಿಲು ಬಂದ್ ಮಾಡಿದರು. ಇದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂಜೆ ವೇಳೆ ದೇವರ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಮೂರ್ನಾಲ್ಕು ವರ್ಷದಿಂದ ಬೆಳಗಿನ ವೇಳೆ ತೇರುಮಲ್ಲೇಶ್ವರಸ್ವಾಮಿಯ ದರ್ಶನಕ್ಕೆ ಭಕ್ತರು ಬಂದಿದ್ದರು. ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಬೆಳಿಗ್ಗೆ 8ರ ಸಮಯದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ನೂರಾರು ಭಕ್ತರು ಬಾಗಿಲ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು.
‘ಆರೇಳು ದಶಕದಿಂದ ಶಿವರಾತ್ರಿ ಸಮಯದಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದೇನೆ. ಎಂದೂ ಹಬ್ಬದ ದಿನ ಗರ್ಭ ಗುಡಿಯ ಬಾಗಿಲು ಹಾಕಿರಲಿಲ್ಲ. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ ಆಗಿದೆ. ಬಾಗಿಲು ಹಾಕಲು ಹೇಳಿದ್ದು ಯಾರು? ಎಂಬ ಪ್ರಶ್ನೆಗೆ ಅಲ್ಲಿ ಯಾರೊಬ್ಬರೂ ಉತ್ತರ ಕೊಡಲಿಲ್ಲ. ಭಕ್ತರ ಸಂಖ್ಯೆ ಹೆಚ್ಚಿದ್ದರೆ ಸ್ವಯಂ ಸೇವಕರು ಅಥವಾ ಪೊಲೀಸರ ಮೂಲಕ ಸಾಲಿನಲ್ಲಿ ನಿಲ್ಲಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕಿತ್ತು’ ಎಂದು ವರ್ತಕ ಆರ್. ಪ್ರಕಾಶ್ ಕುಮಾರ್, ನಿವೃತ್ತ ಶಿಕ್ಷಕ ಓಂಕಾರಪ್ಪ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ಸಂಜೆ 5ರಿಂದಲೇ ದೇವರ ದರ್ಶನಕ್ಕೆ ಭಕ್ತರು ಸಾಲಿನಲ್ಲಿ ನಿಂತಿದ್ದರು. 6ರ ಸಮಯಕ್ಕೆ ಮುಖ್ಯದ್ವಾರದಿಂದ ಹೊರಗಿನವರೆಗೆ ಭಕ್ತರು ನಿಂತಿದ್ದರು. ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಲಡ್ಡು ವಿತರಿಸಲಾಯಿತು.
ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ದೇವರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಬಬ್ಬೂರು ಚನ್ನಬಸಣ್ಣ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.