ADVERTISEMENT

ಕಂಚೀಪುರ | ಸಂಕ್ರಾಂತಿ: ಮೊಲ ಹಿಡಿದು ಓಲೆ ಹಾಕಿ ಕಾಡಿಗೆ ಬಿಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 5:26 IST
Last Updated 16 ಜನವರಿ 2024, 5:26 IST
ಹೊಸದುರ್ಗದ ಕಂಚೀಪುರದಲ್ಲಿ ಸೆರೆ ಹಿಡಿದಿರುವ ಮೊಲ
ಹೊಸದುರ್ಗದ ಕಂಚೀಪುರದಲ್ಲಿ ಸೆರೆ ಹಿಡಿದಿರುವ ಮೊಲ   

ಹೊಸದುರ್ಗ: ತಾಲ್ಲೂಕಿನ ಕಂಚೀಪುರದಲ್ಲಿ ಕಾಡಿನ ಮೊಲ ಬೇಟೆಯಾಡಿ, ಆ ಮೊಲಕ್ಕೆ ಓಲೆ ಹಾಕಿ ಪುನಃ ಕಾಡಿಗೆ ಬಿಡುವ ಮೂಲಕ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.

ಸಂಕ್ರಾಂತಿ ಎಂದರೆ ಮನೆಯಲ್ಲಿ ಸಿಹಿ ಪದಾರ್ಥ ಸೇವಿಸಿ, ಬಂಧು ಬಳಗದೊಟ್ಟಿಗೆ ಪುಣ್ಯ ಸ್ಥಳಗಳಿಗೆ ತೆರಳುವುದು, ಎಳ್ಳು ಬೆಲ್ಲ ವಿನಿಮಯ ಸರ್ವೇ ಸಾಮಾನ್ಯ. ಆದರೆ, ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಮೊಲ ಭೇಟಿಯಾಡಿ, ದೇವರ ಉತ್ಸವ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸುವರು.

ಸಂಕ್ರಾಂತಿ ಹಬ್ಬದ ಅಂಗವಾಗಿ ಕಂಚೀವರದರಾಜ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಮೊಲದ ಹುಡುಕಾಟಕ್ಕಾಗಿ ಕಾಡಿಗೆ ಬೇಟೆ ಹೊರಟರು.

ಇಲ್ಲಿ ಬೇಟೆ ಎಂದರೆ ಪ್ರಾಣಿ ಕೊಲ್ಲುವುದಲ್ಲ. ಜೀವಂತ ಮೊಲವನ್ನು ಬೇಟೆಯಾಡಿ ತರಲಾಗುತ್ತದೆ. ಆ ಮೊಲಕ್ಕೆ ಬಂಗಾರದ ಓಲೆ ಹಾಕಿ, ರಾತ್ರಿ ಕಂಚೀವರದರಾಜ ಸ್ವಾಮಿಯ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡಲಾಗುತ್ತದೆ. ನಂತರ ಸ್ವಾಮಿ ಉತ್ಸವ ನಡೆಯುತ್ತದೆ. ಹೀಗೆ ಮಾಡುವುದರಿಂದ ಶೂನ್ಯ ಮಾಸದಲ್ಲಿನ ಅಶುಭ ದೂರವಾಗಿ, ಶುಭ ದಿನ ಆರಂಭವಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.

ADVERTISEMENT

‘ಈಗ ಎಲ್ಲಾ ಊರಂತೆ ನಮ್ಮೂರಲ್ಲೂ ವಲಸೆ ಹೋಗಿ ದುಡಿಮೆ ಮಾಡೋ ಜನರೇ ಹೆಚ್ಚು. ಬಹುತೇಕ ಸ್ನೇಹಿತರು, ಬಂಧು ಬಳಗದವರು ಈ ಹಬ್ಬಕ್ಕೆ ಬರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಹರಟೆ ಹೊಡೆದು, ಕಷ್ಟ– ಸುಖ ಹಂಚಿಕೊಳ್ಳಲು ಬೇಟೆಯಂತಹ ಕಾರ್ಯದಲ್ಲಿ ಭಾಗಿಯಾಗುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಯುವಕರೇ ಹೆಚ್ಚು ಬೇಟೆ ಹೋಗುವುದರಿಂದ ಮೊಲ ಯಾರು ಹಿಡಿಯಬಹುದು ಎಂಬ ಕೂತೂಹಲ ಎಲ್ಲರಲ್ಲೂ ಇರುತ್ತದೆ’ ಎಂದು ಗ್ರಾಮದ ಕುಮಾರ್ ತಿಳಿಸಿದರು.

ಮೊಲ ಸಿಕ್ಕ ಬಳಿಕ ಮೊಲವನ್ನು ಸುರಕ್ಷಿತವಾಗಿ ಪುಟ್ಟಿಯಲ್ಲಿ ತಂದು ಕಂಚೀವರದರಾಜ ಸ್ವಾಮಿ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಸ್ವಾಮಿಯ ಉತ್ಸವ ನಡೆಸುವ ಮೂಲಕ ಸಂಕ್ರಮಣ ಆಚರಿಸಲಾಯಿತು.

ಹೊಸದುರ್ಗದ ಕಂಚೀಪುರದಲ್ಲಿ ಮೊಲ ಬೇಟೆಗಾಗಿ ಹೊರಟಿರುವ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.