ಹಿರಿಯೂರು: ‘ಒಂಭತ್ತು ವರ್ಷಗಳ ಆಡಳಿತದಲ್ಲಿ ಇಡೀ ಜಗತ್ತು ಭಾರತದತ್ತ ಅಚ್ಚರಿಯ ಕಣ್ಣುಗಳಿಂದ ನೋಡುವಂತೆ ಮಾಡಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದಲ್ಲಿ ದೇಶವನ್ನು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸುವ ವಿಶ್ವಾಸವಿದೆ’ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದಲ್ಲಿ ಶುಕ್ರವಾರ ‘ಜನಗಣ ಮನ ಬೆಸೆಯೋಣ’ ಬೈಕ್ ರ‍್ಯಾಲಿಯನ್ನು ಸ್ವಾಗತಿಸಿದ ಬ್ರಿಗೇಡ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿಯಾಗಿ ಮೋದಿಯವರು ಏನು ಮಾಡಿದ್ದಾರೆ ಎಂಬುದನ್ನು ಪ್ರಚಾರದ ಮೂಲಕ ಹೇಳುವ ಅಗತ್ಯವಿಲ್ಲ. ಅದು ಜಗತ್ತಿಗೆ ತಿಳಿದಿರುವ ಬಹಿರಂಗ ಸತ್ಯ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಸುತ್ತಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ದೇಶಕ್ಕಾಗಿ ನಿಸ್ವಾರ್ಥತೆಯಿಂದ ದುಡಿಯುವ ನೇತಾರರು ಬೇಕು ಎಂಬುದನ್ನು ಮತ್ತೊಮ್ಮೆ ತೋರಿಸಬೇಕು’ ಎಂದು ಅವರು ತಿಳಿಸಿದರು.
‘ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಬಿಟ್ಟಿ ಭಾಗ್ಯಗಳನ್ನು ಘೋಷಿಸುವ ಮೂಲಕ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷದ ಆಡಳಿತ ಭಯ ಹುಟ್ಟಿಸುತ್ತಿದೆ. ಇಂತಹ ಬಿಟ್ಟಿ ಭರವಸೆಗಳು ಭವಿಷ್ಯದಲ್ಲಿ ಉಂಟು ಮಾಡಬಹುದಾದ ಅನಾಹುತಗಳ ಅರಿವನ್ನು ಜನರಲ್ಲಿ ಮೂಡಿಸಬೇಕಿದೆ. ಈಗಾಗಲೇ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವ ಬಗ್ಗೆ ಜನರಿಗೆ ಮನವರಿಕೆ ಆಗಿದೆ’ ಎಂದು ಹೇಳಿದರು.
‘ಮತ್ತೊಮ್ಮೆ ಮೋದಿ’, ‘ಭಾರತ ವಿಶ್ವಗುರುವಾಗಲು ಮತ್ತೊಮ್ಮೆ ಮೋದಿ ಕೈಗೆ ಅಧಿಕಾರ’ ಇತ್ಯಾದಿ ಘೋಷಣೆಗಳನ್ನು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವರು ಕೂಗಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ್ ಮಸ್ಕಲ್, ಚಲ್ಮೇಶ್, ಯೋಗೀಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ್, ರಾಘವೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.