ಚಿತ್ರದುರ್ಗ: ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಏರಿದ ಮೆಟ್ಟಿಲು ಹಾಗೂ ಸವೆಸಿದ ದಾರಿಯನ್ನು ಎಂದಿಗೂ ಮರೆಯಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಕಿವಿಮಾತು ಹೇಳಿದರು.
ಇಲ್ಲಿನ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ, ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಮಹಾರಾಣಿ ಕಾಲೇಜಿನ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ನಾನು ಕಾಲೇಜು ಮೆಟ್ಟಿಲು ಹತ್ತಿಲ್ಲ. ಆದರೆ, ಇಂದು ಎಲ್ಲೆಡೆ ಕಾಲೇಜಿಗೆ ಕರೆದು ಸನ್ಮಾನ ಮಾಡಲಾಗುತ್ತಿದೆ. ಹಲವು ವಿದ್ಯಾರ್ಥಿಗಳು ನನ್ನ ಜೀವನದ ಪಾಠ ಓದುತ್ತಿದ್ದಾರೆ. ಜನಪದ ಕಲೆ ಆಯ್ದುಕೊಂಡು ಕೆಲಸ ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಕಲೆಗೆ ಸಂದಿದ ಗೌರವ. ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇರಲಿ. ಆಗ ಸಾಧನೆ ಒಲಿಸಯುತ್ತದೆ’ ಎಂದು ಹೇಳಿದರು.
‘ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ತಿರಸ್ಕಾರದ ಭಾವನೆ ಹೋಗಬೇಕು. ಅವರನ್ನು ಮನುಷ್ಯರಂತೆ ಕಾಣಬೇಕು, ಬದುಕಲು ಅವಕಾಶ ಮಾಡಿಕೊಡಬೇಕು. ಅವರಿಗೆ ಶಿಕ್ಷಣ ದೊರೆತರೆ ಉತ್ತಮ ಸಾಧನೆ ಮಾಡಬಲ್ಲರು. ಶಿಕ್ಷಣ, ಪೊಲೀಸ್ ಸೇರಿ ಸರ್ಕಾರದ ವಿವಿಧ ಇಲಾಖೆಯ ಹುದ್ದೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ನೌಕರಿ ಪಡೆಯುತ್ತಿದ್ದಾರೆ’ ಎಂದರು.
ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಸಮಾಜ ಹಣಕ್ಕೆ ಹಪಹಪಿಸುತ್ತಿದೆ. ದುಡ್ಡಿನ ಮೇಲಿನ ವ್ಯಾಮೋಹ ಜನರಲ್ಲಿ ಹೆಚ್ಚಾಗಿದೆ. ಮನಸ್ಸು ಮನುಷ್ಯನ ಸಾಧನೆ ಹಾಗೂ ವಿನಾಶಕ್ಕೆ ಕಾರಣ. ಮನೆಯಿಂದ ಬಡವನಾದರೂ ಘನ ಮನಸು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಮಕದರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಡಾ.ಅರುಣ್, ಪ್ರಾಂಶುಪಾಲ ಪ್ರೊ.ಎ.ವಿ.ನುಂಕಪ್ಪ, ಆಡಳಿತಾಧಿಕಾರಿ ಎಸ್.ಸಾಗರ್ ಇದ್ದರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (ಯುಪಿಎಸ್‌ಸಿ) ಉತ್ತೀರ್ಣರಾಗಿರುವ ಮಹಮ್ಮದ್ ಸಿದ್ದಿಕಿ ಷರೀಫ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.