ಹೊಳಲ್ಕೆರೆ: ‘ಮನುವಾದಿಗಳು ದೇವರನ್ನೂ ವಿಭಜಿಸಿದರು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ನಡೆದ ಮಂತ್ರ ಮಾಂಗಲ್ಯ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ನಾವೇ ಶ್ರೇಷ್ಠರು ಎಂದು ಬಿಂಬಿಸಿಕೊಂಡ ಮನುವಾದಿಗಳು ಲಕ್ಷ್ಮಿ, ಸರಸ್ವತಿ, ಶಿವ, ಪಾರ್ವತಿಯಂತಹ ದೇವರುಗಳನ್ನು ತಾವು ಇಟ್ಟುಕೊಂಡರು. ದಲಿತರಿಗೆ, ಹಿಂದುಳಿದವರಿಗೆ ಕೋಳಿ, ಕುರಿ, ಕೋಣ ಬಲಿಕೊಡುವ ಗುಳ್ಳಮ್ಮ, ಮಾರಮ್ಮ, ದುರಗಮ್ಮರಂತಹ ದೇವಿಯರನ್ನು ನೀಡಿದರು. ಮತದಾನದಿಂದ ದೇಶ ಬದಲಾಗುತ್ತದೆಯೇ ಹೊರತು, ಮಂತ್ರ, ಗುಡಿ, ಗೋಪುರಗಳಿಂದ ಅಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಪೆನ್ನಿನ ಮೂಲಕ ದೇಶವನ್ನು ಬದಲಿಸಿದರು. ಆದರೆ, ಈಗ ಪೆನ್ನಿನ ಬದಲಿಗೆ ಗನ್ನುಗಳು ಮಾತನಾಡುತ್ತಿವೆ’ ಎಂದು ಅಸಹನೆ ವ್ಯಕ್ತಪಡಿಸಿದರು.
‘ಮನುವಾದಿಗಳು ಬಿ.ಆರ್.ಅಂಬೇಡ್ಕರ್ ಅವರು ಮದುವೆ ಆಗಲು ಜಾಗ ಕೊಟ್ಟಿರಲಿಲ್ಲ. ಅವರು ಒಂದು ಮೀನು ಮಾರುಕಟ್ಟೆಯಲ್ಲಿ ಮದುವೆ ಆದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಹರ್ ಘರ್ ತಿರಂಗಾ’ ಅಭಿಯಾನ ಮಾಡಿದಂತೆ ‘ಹರ್ ಘರ್ ಸಂವಿಧಾನ’ ಮಾಡಿ ತೋರಿಸಲಿ. ರಾಜ್ಯದಲ್ಲಿ 1.75 ಕೋಟಿ ದಲಿತರಿದ್ದರೂ ಬೀದಿಯಲ್ಲಿ ನಿಂತಿದ್ದೇವೆ’ ಎಂದು ಅವರು ಹೇಳಿದರು.
‘ಮಂತ್ರ ಮಾಂಗಲ್ಯ ಪೌರೋಹಿತ್ಯ ದಿಕ್ಕರಿಸಿ ಮಾಡುವ ಮದುವೆ. ಬಿಜೆಪಿ, ಆರ್‌ಎಸ್‌ಎಸ್‌ನವರು ಮಕ್ಕಳಲ್ಲಿಯೂ ಕೋಮು ಭಾವನೆ ಕೆರಳಿಸುತ್ತಿದ್ದಾರೆ. ಶಿಕ್ಷಣ ಸಚಿವರು ಶಾಲೆಗಳಿಗೆ ಕೇಸರಿ ಬಣ್ಣ ಬಳಿಸುವುದಾಗಿ ಹೇಳುತ್ತಾರೆ. ದೇಶದ ಜನ ದನದ ಮೂತ್ರ ಕುಡಿದು ಬದುಕುತ್ತಿದ್ದಾರೆ. ಬ್ರಿಟಿಷರು ತಂತ್ರಜ್ಞಾನದಿಂದ ಕಟ್ಟಿದ ಕಟ್ಟಡ, ಸೇತುವೆಗಳು ಇನ್ನೂ ಗಟ್ಟಿಮುಟ್ಟಾಗಿವೆ. ಆದರೆ ನಮ್ಮವರು ಶಾಸ್ತ್ರೋಕ್ತವಾಗಿ ಕಟ್ಟಿದ ಕಟ್ಟಡಗಳು ಬೀಳುತ್ತಿವೆ. ಮನುವಾದಿಗಳು ಭೀಮಾ ಕೋರೇಗಾಂವ್ ಯುದ್ಧವನ್ನೇ ಮುಚ್ಚಿಟ್ಟಿದ್ದರು’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.
ಚಿಂತಕ ಪ್ರೊ.ಗಣಪತಿ ಉತ್ತುಂಗ 9 ಜೋಡಿಗಳಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಅಂಶಗಳನ್ನು ಬೋಧಿಸುವ ಮೂಲಕ ವಿವಾಹ ಮಾಡಿಸಿದರು.
ಹರಳಯ್ಯ ಸ್ವಾಮೀಜಿ, ಸವಿತಾನಂದ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ತಾಲ್ಲೂಕು ಸಂಚಾಲಕ ನವೀನ್ ಮದ್ದೇರು, ಶಿವಣ್ಣ, ಮಂಜಣ್ಣ, ಮಹಿಳಾ ಒಕ್ಕೂಟದ ಸಂಚಾಲಕಿ ಗೌರಮ್ಮ, ನವೀನ್ ಕುಮಾರ್, ನಾಗರಾಜ್, ಶ್ರೀನಿವಾಸ್ ಬಂಡೆಹಟ್ಟಿ, ರುದ್ರಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.