ಚಿತ್ರದುರ್ಗ: ಬದುಕಿನ ಸ್ವಾತಂತ್ರ್ಯಕ್ಕಾಗಿ ಭೂಮಿ, ವಸತಿ, ನಿವೇಶನ ವಂಚಿತ ಬಡಜನರಿಂದ ಆ.14, 15ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಏಳು ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಕುಮಾರ್ ಸಮತಳ ತಿಳಿಸಿದರು.
‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡ ಜನರಿಗಾಗಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಜನರು ಸರ್ಕಾರದ ಸೌಲಭ್ಯಗಳನ್ನು ಆಧರಿಸುವ ಬದಲು ಸ್ವಾವಲಂಬಿ ಬದುಕಿನ ಗ್ಯಾರಂಟಿ ನೀಡಬೇಕು. 94ಸಿ/94ಸಿಸಿಯಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಹಾಗೂ ರಾಜ್ಯದಾದ್ಯಂತ ಕೊಳೆಗೇರಿ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ನೀಡಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಮುಖ್ಯಮಂತ್ರಿ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಹೋರಾಟದ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ಕರೆಯಬೇಕು. ಭೂಮಿ, ಮನೆ ಮತ್ತು ನಿವೇಶನಗಳ ಮಂಜೂರಾತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲು ಉನ್ನತ ಅಧಿಕಾರ ಸಮಿತಿ ರಚಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ರೈತರು ಮತ್ತು ಹೋರಾಟಗಾರರ ಮೇಲೆ ಅರಣ್ಯ ಇಲಾಖೆ, ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಯಾವುದೇ ಸರ್ಕಾರಿ ಅಥವಾ ಅರಣ್ಯ ಭೂಮಿಯಲ್ಲಿ 5 ಎಕರೆಗಿಂತ ಕಡಿಮೆ ಸಾಗುವಳಿ ಇಲ್ಲವೇ ಒತ್ತುವರಿ ಮಾಡಿಕೊಂಡಿರುವ ಯಾವುದೇ ಅರ್ಜಿದಾರರನ್ನು ಪರ್ಯಾಯ ಒದಗಿಸದೆ ತೆರವುಗೊಳಿಸಬಾರದು. ಶ್ರೀಮಂತರು ಮಾಡಿಕೊಂಡಿರುವ ಒತ್ತುವರಿಯನ್ನು ತೆರವುಗೊಳಿಸಿ ಭೂರಹಿತರಿಗೆ ಭೂಮಿ ಮತ್ತು ನಿವೇಶಗಳನ್ನು ಹಂಚಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಕೆ.ಜೆ.ದುರುಗೇಶಪ್ಪ, ಎಚ್.ವೆಂಕಟೇಶ್, ಬಿ.ಬಿ.ಹಟ್ಟಿ, ಟಿ.ಹನುಮಯ್ಯ, ಸಣ್ಣ ವೀರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.