ADVERTISEMENT

ವಿವಾದಕ್ಕೆ ತಲೆಕೆಡಿಸಿಕೊಳ್ಳದ ಕೋಟೆನಾಡ ಜನ: ಕಳೆಗಟ್ಟಿದ ವರ್ಷದ ತೊಡಕಿನ ಸಂಭ್ರಮ

ಮುಂಜಾನೆಯಿಂದಲೇ ಮಾಂಸ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 13:39 IST
Last Updated 5 ಏಪ್ರಿಲ್ 2022, 13:39 IST
ಗ್ರಾಹಕರಿಂದ ತುಂಬಿದ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿನ ಕುರಿ–ಕೋಳಿ ಮಾಂಸ ಮಾರಾಟ ಕೇಂದ್ರಗಳು.
ಗ್ರಾಹಕರಿಂದ ತುಂಬಿದ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿನ ಕುರಿ–ಕೋಳಿ ಮಾಂಸ ಮಾರಾಟ ಕೇಂದ್ರಗಳು.   

ಚಿತ್ರದುರ್ಗ: ಹಲಾಲ್‌ ಮತ್ತು ಜಟ್ಕಾ ವಿವಾದದ ನಡುವೆಯೂ ಜಿಲ್ಲೆಯಾದ್ಯಂತ ಮಂಗಳವಾರ ಯುಗಾದಿ ‘ಹೊಸ ವರ್ಷದ ತೊಡಕಿನ’ ಸಂಭ್ರಮ ಕಳೆಗಟ್ಟಿತು. ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಕ್ಷೀಣಿಸಿದ್ದ ಉತ್ಸಾಹ ಮತ್ತೆ ಗರಿಗೆದರಿತು. ಮುಂಜಾನೆಯಿಂದಲೇ ಮಟನ್‌ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ, ಭಾನುವಾರ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿತ್ತು. ಸೋಮವಾರ ನೀರು ಎರಚುವ ಹಬ್ಬದೊಂದಿಗೆ ಯುಗಾದಿ ಸಂಪನ್ನವಾಯಿತು. ಮಂಗಳವಾರ ಬಾಡೂಟದೊಂದಿಗೆ‘ಹೊಸ ವರ್ಷದ ತೊಡಕು’ ಆಚರಿಸಲಾಯಿತು. ಮಾಂಸಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ಹಲಾಲ್‌ ಮತ್ತು ಜಟ್ಕಾ ವಿವಾದಕ್ಕೆ ಜನರು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲವೆಂಬುದು ಗೋಚರಿಸಿತು.

ಹಬ್ಬದ ಮಾರನೆ ದಿನ ವರ್ಷ ತೊಡಕು ಆಚರಿಸುವುದು ರೂಢಿ. ಅದರಂತೆ ಮಂಗಳವಾರ ಹೊಸ ವರ್ಷದ ತೊಡಕಿಗೆ ಸಿದ್ಧವಾದ ಜನರು ಮುಂಜಾನೆಯೇ ಮಾಂಸ ಖರೀದಿಗಾಗಿ ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು.ಕೋಳಿ, ಕುರಿ ಮಾಂಸ ಹಾಗೂ ಮೀನಿನ ಅಂಗಡಿ ಮಾಲೀಕರು ನಸುಕಿನಲ್ಲೇ ಮಳಿಗೆಗಳ ಬಾಗಿಲು ತೆರೆದು ವಹಿವಾಟು ಆರಂಭಿಸಿದರು. ಗ್ರಾಮೀಣ ಭಾಗದಲ್ಲಿ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಗುಡ್ಡೆ ಮಾಂಸ ಮಾರಾಟ ಮಾಡಲಾಯಿತು.

ADVERTISEMENT

ನಗರದ ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ರಸ್ತೆ, ಹೊಳಲ್ಕೆರೆ ರಸ್ತೆ, ಮಟನ್‌ ಮಾರುಕಟ್ಟೆಯ ಸುತ್ತಮುತ್ತಲಿನ ಕೋಳಿ, ಮೀನು ಹಾಗೂ ಕುರಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಅಂಗಡಿಗಳ ಮುಂದೆ ಗ್ರಾಹಕರು ಮಾಂಸ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಹಿಂದೂ, ಮುಸ್ಲಿಮರ ಅಂಗಡಿ ಎಂಬ ಭೇದಭಾವ ಗ್ರಾಹಕರಲ್ಲಿ ಕಂಡುಬರಲಿಲ್ಲ.

‘ಹೊಸ ವರ್ಷದ ತೊಡಕಿನ’ ಹಿನ್ನೆಲೆಯಲ್ಲಿ ಕೋಳಿ ಮತ್ತು ಕುರಿ ಮಾಂಸದ ಬೆಲೆ ಜತೆಗೆ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪಿನ ಬೆಲೆ ಸಹ ಏರಿಕೆಯಾಗಿತ್ತು. ಆದರೆ ಯಾವುದಕ್ಕೂ ತಲೆ ಕಡೆಸಿಕೊಳ್ಳದ ಗ್ರಾಹಕರು ಖರೀದಿಯಲ್ಲಿ ತಲ್ಲಿನರಾಗಿದ್ದರು. ಸೌತೆಕಾಯಿ, ಈರುಳ್ಳಿ, ನಿಂಬೆ ಹಣ್ಣು ವ್ಯಾಪಾರ ಸಹ ಭರ್ಜರಿಯಾಗಿ ನಡೆಯಿತು.

ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ತಂದಿದ್ದ ನಾಟಿ ಕೋಳಿಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಬಹುತೇಕ ಕುರಿ ಹಾಗೂ ಕೋಳಿ ಮಾಂಸದ ಅಂಗಡಿ ಮಾಲೀಕರು ಗ್ರಾಹಕರಿಂದ ಮುಂಗಡ ಹಣ ಪಡೆದು ನಂತರ ಮಾಂಸ ವಿತರಿಸಿದರು. ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ಮಾಂಸದ ಸಾರು, ಮುದ್ದೆ, ಬಿರಿಯಾನಿ, ಕಬಾಬ್‌, ಬೋಟಿ ಫ್ರೈ ಸೇರಿದಂತೆ ವಿವಿಧ ಭಕ್ಷ್ಯಗಳು ಮಾಂಸ ಪ್ರಿಯರ ಬಾಯಲ್ಲಿ ನೀರೂರಿಸಿದವು. ಸ್ನೇಹಿತರು, ನೆಂಟರ ಜತೆ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಬಾಡೂಟ ಸವಿದರು.

‘ಹಲಾಲ್‌– ಜಟ್ಕಾ ಮುಖ್ಯವಲ್ಲ’

ಕೆಲ ದಿನಗಳಿಂದ ಹಲಾಲ್–ಜಟ್ಕಾ ಬಗ್ಗೆ ಗೊಂದಲ ಜೋರಾಗಿದ್ದರು ಸಹ ಬಹುತೇಕರು ಈ ಬಗ್ಗೆ ಅಂಗಡಿಗಳಲ್ಲಿ ವಿಚಾರಿಸಲಿಲ್ಲ. ಪ್ರತಿ ವರ್ಷದಂತೆ ತಮ್ಮಿಷ್ಟದ ಅಂಗಡಿಗಳಲ್ಲಿ ಗುಣಮಟ್ಟದ ಮಾಂಸ ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದರು.

‘ನಮಗೆ ಹಲಾಲ್‌ ಕಟ್‌, ಜಟ್ಕಾ ಕಟ್‌ ಗೊತ್ತಿಲ್ಲ. ಯಾವ ರೀತಿಯಲ್ಲಿ ಮಾಂಸ ಕತ್ತರಿಸುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ಗುಣಮಟ್ಟ, ಶುಚಿತ್ವದ ಮಾಂಸ ಖರೀದಿಗೆ ಬಂದಿದ್ದೇವೆ. ಈ ಹಿಂದೆಯೂ ಈ ಬಗ್ಗೆ ಗಮನ ಹರಿಸಲ್ಲ, ಮುಂದೆಯೂ ಅದರ ಅವಶ್ಯತೆಯಿಲ್ಲ’ ಎಂದರು ಮಾಂಸ ಖರೀದಿಸಿದ ತಿಮ್ಮಣ್ಣ.

ನಗರದ ಐಯುಡಿಪಿ ಬಡಾವಣೆ ರಸ್ತೆಯ 'ಹಿಂದವೀ ಜಟ್ಕಾ ಮೀಟ್‌ ಮಾರ್ಟ್' ಮಳಿಗೆಯಲ್ಲಿ ಮಂಗಳವಾರ ಚಿಕನ್‌ ಮಾರಾಟ ನಡೆಯಿತು. ಗ್ರಾಹಕರು ಈ ಕೇಂದ್ರದಲ್ಲೂ ಚಿಕನ್‌ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.