ADVERTISEMENT

ದಾವಣಗೆರೆ ವಿ.ವಿ. ‘ಕನ್ನಡ’ ಕೊಠಡಿಯಲ್ಲಿ ಮೆಡಿಕಲ್‌ ಕಾಲೇಜು ಪಾಠ!

ಪ್ರಯೋಗಾಲಯ ಉಪಕರಣ, ಅಧ್ಯಾಪಕರ ಕೊರತೆ, ವಿದ್ಯಾರ್ಥಿಗಳ ಪರದಾಟ

ಎಂ.ಎನ್.ಯೋಗೇಶ್‌
Published 26 ಜುಲೈ 2024, 6:10 IST
Last Updated 26 ಜುಲೈ 2024, 6:10 IST
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಡೆಯುತ್ತಿರುವ ದಾವಣಗೆರೆ ವಿವಿ, ಜ್ಞಾನಗಂಗೋತ್ರಿ ಆವರಣದ ಕನ್ನಡ ಅಧ್ಯಯನ ಕೇಂದ್ರ
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಡೆಯುತ್ತಿರುವ ದಾವಣಗೆರೆ ವಿವಿ, ಜ್ಞಾನಗಂಗೋತ್ರಿ ಆವರಣದ ಕನ್ನಡ ಅಧ್ಯಯನ ಕೇಂದ್ರ   

ಚಿತ್ರದುರ್ಗ: ಕಳೆದ ವರ್ಷ ಆರಂಭವಾಗಿರುವ ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಅನುಭವಿ ಪ್ರಾಧ್ಯಾಪಕರು, ಸುಸಜ್ಜಿತ ಪ್ರಯೋಗಾಲಯ, ಆಧುನಿಕ ಉಪಕರಣ ಸೇರಿದಂತೆ ಮೂಲ ಸೌಲಭ್ಯದ ಕೊರತೆ ಎದುರಿಸುತ್ತಿದೆ. ಪಾಠ ಪ್ರವಚನಕ್ಕೆ ದಾವಣಗೆರೆ ವಿ.ವಿ.ಯ ಜ್ಞಾನಗಂಗೋತ್ರಿ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಕೊಠಡಿಗಳನ್ನೇ ಆಶ್ರಯಿಸಿದೆ.

ನಗರದಿಂದ 8 ಕಿ.ಮೀ. ದೂರದಲ್ಲಿರುವ ಆರ್‌.ಜಿ. ಹಳ್ಳಿಯಲ್ಲಿ ಜ್ಞಾನಗಂಗೋತ್ರಿ ಆವರಣವಿದ್ದು ಕನ್ನಡ ಅಧ್ಯಯನ ವಿಭಾಗದ ಸಭಾಂಗಣವೇ ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳ ತರಗತಿಯಾಗಿದೆ. ಕಷ್ಟಪಟ್ಟು ಓದಿ ವೈದ್ಯಕೀಯ ಸೀಟು ಪಡೆದ ರಾಜ್ಯ ಹಾಗೂ ಹೊರರಾಜ್ಯಗಳ 250 ವಿದ್ಯಾರ್ಥಿಗಳು ಮೂಲ ಸೌಲಭ್ಯವೂ ಇಲ್ಲದ ಕಟ್ಟಡದಲ್ಲಿ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

2023– 24ನೇ ಸಾಲಿನಿಂದ ದಾಖಲಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಮೊದಲ ವರ್ಷದ ಅಂತಿಮ ಹಂತದಲ್ಲಿದ್ದಾರೆ. ಆ. 9ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಸಮರ್ಪಕವಾಗಿ ಪಾಠಪ್ರವಚನ ನಡೆಯದೇ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಸ್ವಯಂಪ್ರೇರಿತವಾಗಿ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ.

ADVERTISEMENT

ಕೇವಲ 8 ಸಿಬ್ಬಂದಿ: ವೈದ್ಯಕೀಯ ಕಾಲೇಜಿಗೆ 73 ಬೋಧಕ ಹುದ್ದೆ ಮಂಜೂರಾತಿ ಇದೆ. ಆದರೆ ಸದ್ಯ ವಿಶೇಷಾಧಿಕಾರಿ ಸೇರಿದಂತೆ ಒಬ್ಬರು ಸಹ ಪ್ರಾಧ್ಯಾಪಕ, ಇಬ್ಬರು ಸಹಾಯಕ ಪ್ರಾಧ್ಯಾಪಕರು, ನಾಲ್ವರು ಬೋಧಕರು (ಎಂಬಿಬಿಎಸ್‌ ಪೂರೈಸಿದ ಟ್ಯೂಟರ್‌) ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ಉಳಿದಂತೆ ಜಿಲ್ಲಾ ಆಸ್ಪತ್ರೆ ವೈದ್ಯರು, ಹುಬ್ಬಳ್ಳಿ, ಕೊಪ್ಪಳ, ಗದಗ ವೈದ್ಯಕೀಯ ಕಾಲೇಜುಗಳಿಂದ ಅಧ್ಯಾಪಕರನ್ನು ಕರೆಯಿಸಿ ವಾರಕ್ಕೆ 1ರಿಂದ 2 ತರಗತಿಗಳಂತೆ ಪಾಠ ಬೋಧನೆ ಮಾಡಿಸಲಾಗಿದೆ.

‘ಹಾಗೂ ಹೀಗೂ ಮಾಡಿ ವಿಷಯವಾರು ಪಠ್ಯಗಳ ಬೋಧನೆ ಪೂರ್ಣಗೊಳಿಸಿದ್ದಾರೆ. ಆದರೆ ಪ್ರಾಯೋಗಿಕ ತರಗತಿಗಳು ಸರಿಯಾಗಿ ಆಗಿಲ್ಲ. 2 ಪ್ರಯೋಗಾಲಯ ಇದ್ದರೂ ಅಲ್ಲಿ ಉಪಕರಣಗಳಿಲ್ಲದ್ದಕ್ಕೆ ಉಪಯೋಗಕ್ಕೆ ಬಂದಿಲ್ಲ. ಕಾಲೇಜು ಒಂದು ಕಡೆ, ಆಸ್ಪತ್ರೆ ಇನ್ನೊಂದು ಕಡೆ, ಹಾಸ್ಟೆಲ್‌ ಮತ್ತೊಂದು ಕಡೆ ಇರುವುದರಿಂದ ಓದಲು ಆಗುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಆಮೆಗತಿ ಕಾಮಗಾರಿ: ರಾಜ್ಯ ಸರ್ಕಾರ 2012–13ರಲ್ಲೇ ಚಿತ್ರದುರ್ಗ ವೈದ್ಯಕೀಯ ಕಾಲೇಜು ಘೋಷಣೆ ಮಾಡಿ ಅದಕ್ಕಾಗಿ ನಗರದಿಂದ 9 ಕಿ.ಮೀ ದೂರದಲ್ಲಿರುವ ಚಿಕ್ಕಪುರ ಗ್ರಾಮದ ಬಳಿ 30 ಎಕರೆ ಜಾಗ ನಿಗದಿಗೊಳಿಸಿತ್ತು. 2022ರಲ್ಲಿ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ದೊರೆತ ಹಿನ್ನೆಲೆಯಲ್ಲಿ 2023ರಿಂದ ದಾಖಲಾತಿ ಆರಂಭಗೊಂಡಿದೆ.

ಚಿಕ್ಕಪುರ ಗ್ರಾಮವು ನಗರದಿಂದ ದೂರ ಎಂಬ ಕಾರಣಕ್ಕೆ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ 9 ತಿಂಗಳ ಹಿಂದೆ ವೈದ್ಯಕೀಯ ಕಾಲೇಜು ಕಾಮಗಾರಿ ಆರಂಭಿಸಲಾಗಿದೆ. ಸರ್ಕಾರ ಕಾಮಗಾರಿಗೆ ₹ 600 ಕೋಟಿ ಘೋಷಣೆ ಮಾಡಿತ್ತು, ಸದ್ಯ ₹ 60 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.

ಮೂಲ ಸೌಲಭ‌್ಯ ಸಮರ್ಪಕವಾಗಿ ಅನುಷ್ಠಾನ ಆಗದ್ದರಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗ ರಾಜ್ಯದ 27 ಮೆಡಿಕಲ್‌ ಕಾಲೇಜುಗಳಿಗೆ ದಂಡ ವಿಧಿಸಿದ್ದು ಅದರಲ್ಲಿ ಚಿತ್ರದುರ್ಗ ಕಾಲೇಜು ಸಹ ಸೇರಿದೆ.

ಸಾಕಷ್ಟು ಕೊರತೆಗಳ ನಡುವೆಯೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾಲೇಜು ಮುನ್ನಡೆಸುತ್ತಿದ್ದೇವೆ. ಕಾಯಂ ಬೋಧಕ ಸಿಬ್ಬಂದಿ ನೇಮಕಾತಿಯಾದರೆ ಸಮಸ್ಯೆ ಬಗೆಹರಿಯಲಿದೆ

- ಡಾ.ಯುವರಾಜ್‌ ವಿಶೇಷಾಧಿಕಾರಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

ವಾರ್ಡ್‌ ಕಟ್ಟಡ ತೆರವಿಗೆ ಆಕ್ರೋಶ

ಚಿಕ್ಕಪುರ ಗ್ರಾಮದಲ್ಲಿ 30 ಎಕರೆ ಲಭ್ಯವಿದ್ದರೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೆಲವು ವಾರ್ಡ್‌ ಕಟ್ಟಡ ತೆರವುಗೊಳಿಸಿ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿರುವುದಕ್ಕೆ ಜಿಲ್ಲೆಯ ವೈದ್ಯರು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 780 ವಿದ್ಯಾರ್ಥಿಗಳಿರುವ ಎಎನ್‌ಎಂ ಜಿಎನ್‌ಎಂ ಬಿಎಸ್‌ಸಿ ನರ್ಸಿಂಗ್‌ ಅರೆ ವೈದ್ಯಕೀಯ ತರಬೇತಿ ಕಟ್ಟಡ ರಕ್ತನಿಧಿ ಕಟ್ಟಡ ಡಯಾಲಿಸಿಸ್‌ ವಾರ್ಡ್‌ ತೆರವುಗೊಳಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದೆ. ‘ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿ ಅವೈಜ್ಞಾನಿಕವಾದುದು. ಕಾಲೇಜು ಡಿಪಿಆರ್‌ನಲ್ಲಿ ಗ್ರಂಥಾಲಯ ಆಟದ ಮೈದಾನ ವಸತಿ ನಿಲಯಗಳೇ ಇಲ್ಲ. ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಟಿ.ವಿಜಯಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.