ADVERTISEMENT

ಗಣಿತ ಮೇಷ್ಟ್ರ ನಿಸ್ವಾರ್ಥ ಸೇವೆ: ನಿವೃತ್ತಿ ನಂತರವೂ ಮುಂದುವರಿದಿದೆ ಕಾಯಕ

ಸಾಂತೇನಹಳ್ಳಿ ಸಂದೇಶ ಗೌಡ
Published 2 ಜನವರಿ 2024, 6:24 IST
Last Updated 2 ಜನವರಿ 2024, 6:24 IST
   

ಹೊಳಲ್ಕೆರೆ: ನಿವೃತ್ತಿಯ ನಂತರ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬದವರ ಜೊತೆ ಕಾಲ ಕಳೆಯಲು ಬಯಸುವವರೇ ಹೆಚ್ಚು. ಆದರೆ, ತಾಲ್ಲೂಕಿನ ಮಾಳೇನಹಳ್ಳಿಯ ಶಿಕ್ಷಕ ಬಿ.ಬಸಪ್ಪ ಇದಕ್ಕೆ ಹೊರತಾಗಿದ್ದಾರೆ. ಇವರು ನಿವೃತ್ತರಾದರೂ, ಅಕ್ಷರ ಕಲಿಸುವ ಕಾಯಕವನ್ನು ನಿಲ್ಲಿಸಿಲ್ಲ. ಸ್ವಗ್ರಾಮಕ್ಕೆ ತೆರಳಿ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಬೋಧಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

2016ರಲ್ಲಿ ನಿವೃತ್ತರಾಗಿರುವ ಬಸಪ್ಪ ಮೇಷ್ಟ್ರು, ನಂತರವೂ ನಿರಂತರವಾಗಿ ಶಾಲೆಯಲ್ಲಿ ಗಣಿತ ಬೋಧಿಸುತ್ತಿದ್ದಾರೆ. ಇದಕ್ಕಾಗಿ ಯಾವ ಸಂಭಾವನೆಯನ್ನೂ ಪಡೆಯುತ್ತಿಲ್ಲ. ನಿಸ್ವಾರ್ಥ ಸೇವೆಯ ಮೂಲಕ ವಿದ್ಯಾರ್ಥಿಗಳ ಪ್ರೀತಿ ಗಳಿಸಿರುವ ಇವರು, ಎಲ್ಲರ ಇಷ್ಟದ ಶಿಕ್ಷಕರಾಗಿದ್ದಾರೆ.

‘1977ರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದೆ. ಶುರುವಿನಿಂದಲೂ ಗಣಿತವನ್ನೇ ಬೋಧಿಸುತ್ತಿದ್ದೇನೆ. 40 ವರ್ಷಗಳ ಸೇವಾ ಅವಧಿಯಲ್ಲಿ ವಿವಿಧ ಶಾಲೆಗಳಲ್ಲಿ ಕೆಲಸ ಮಾಡಿದ್ದೇನೆ. 2016ರಲ್ಲಿ ನಿವೃತ್ತನಾದ ಮೇಲೆ ಸ್ವಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಬೋಧನೆ ಮಾಡುವ ತೀರ್ಮಾನ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ನಿತ್ಯವೂ ಪಾಠ ಮಾಡುತ್ತಿದ್ದೇನೆ’ ಎಂದು ಬಸಪ್ಪ ಹೇಳಿದರು.

ADVERTISEMENT

‘ನಿವೃತ್ತಿ ನಂತರ ಖಾಲಿ ಕೂರುವುದರಿಂದ ದೇಹ ಹಾಗೂ ಮನಸ್ಸಿಗೆ ರೋಗ ಬಾಧಿಸುವುದೇ ಹೆಚ್ಚು. ನಾವು ಚಟುವಟಿಕೆಯಿಂದ ಇದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ನಿವೃತ್ತಿಯ ನಂತರ ಬೇರೆ ಉದ್ಯೋಗ ಮಾಡುವುದಕ್ಕಿಂತಲೂ ಶಾಲೆಗೆ ಹೋಗಿ ಪಾಠ ಮಾಡುವುದೇ ಸೂಕ್ತ ಅನಿಸಿತು. ಈ ಕಾರಣಕ್ಕೆ ಅಕ್ಷರ ಕಲಿಸುವ ಕಾಯಕ ಮುಂದುವರಿಸಲು ತೀರ್ಮಾನಿಸಿದೆ’ ಎಂದು ತಿಳಿಸಿದರು.

‘ಖಾಸಗಿ ಶಾಲೆಯಲ್ಲಿ ಪಾಠ ಮಾಡಿದ್ದರೆ ಒಂದಷ್ಟು ಹಣ ಸಿಗುತ್ತಿತ್ತು. ನಾನು ದುಡ್ಡಿಗಾಗಿ ಪಾಠ ಮಾಡದೇ ಬಡಮಕ್ಕಳಿಗೆ ಕಲಿಸುವ ನಿರ್ಧಾರ ಮಾಡಿದೆ. ಹೇಗೂ ಸರ್ಕಾರ ನಿವೃತ್ತಿ ವೇತನ ನೀಡುತ್ತಿದೆ‌’ ಎಂದು ಅವರು ಹೆಮ್ಮೆಯಿಂದ ಹೇಳಿದರು.

‘ಶಾಲೆಯಲ್ಲಿ 51 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರಿದ್ದೇವೆ. ಸೇವೆಯಿಂದ ನಿವೃತ್ತರಾಗಿರುವ ಬಸಪ್ಪ ಮೇಷ್ಟ್ರು ಶಾಲೆಗೆ ಬಂದು ನಿತ್ಯವೂ ಉತ್ಸಾಹದಿಂದ ಪಾಠ ಮಾಡುತ್ತಾರೆ. ಸೇವಾ ಅವಧಿಯಲ್ಲೇ ಪಾಠ ಮಾಡಲು ತಾತ್ಸಾರ ತೋರುವ ಶಿಕ್ಷಕರ ನಡುವೆ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಬೋಧನೆ ಮಾಡುವ ಮೂಲಕ ಬಸಪ್ಪ ಮೇಷ್ಟ್ರು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಠಿಣ ಎಂದೇ ಭಾವಿಸಲ್ಪಟ್ಟಿರುವ ಗಣಿತವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸುಲಿತವಾಗಿ ಕಲಿಸುತ್ತಾರೆ’ ಎಂದು ಶಾಲೆಯ ಮುಖ್ಯಶಿಕ್ಷಕ ಸಿ.ಬಿ.ಈಶ್ವರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.