ADVERTISEMENT

ಕುಡಿಯುವ ನೀರು ಪೂರೈಕೆಗೆ ಆಗ್ರಹ: ಸಚಿವ ಡಿ.ಸುಧಾಕರ್‌ಗೆ ಘೇರಾವ್‌

ಪ್ರಚಾರಕ್ಕೆ ತೆರಳಿದ್ದಾಗ ಆಕ್ರೋಶಗೊಂಡ ಗ್ರಾಮಸ್ಥರು, ಕುಡಿಯುವ ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 13:54 IST
Last Updated 12 ಏಪ್ರಿಲ್ 2024, 13:54 IST
ಡಿ.ಸುಧಾಕರ್‌
ಡಿ.ಸುಧಾಕರ್‌   

ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರಿಗೆ ಶುಕ್ರವಾರ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡದೇ ವಾಪಾಸ್‌ ಕಳುಹಿಸಿದರು.

ಪ್ರಚಾರಕ್ಕೆ ಅವಕಾಶ ಮಾಡಿಕೊಂಡುವಂತೆ ಕಾಂಗ್ರೆಸ್‌ ಮುಖಂಡರ ಕೋರಿಕೆಗೆ ಗ್ರಾಮಸ್ಥರು ಮಣಿಯಲಿಲ್ಲ. ಸಚಿವರು ಕಾರು ಇಳಿಯಲು ಸಾಧ್ಯವಾಗದೇ ಪ್ರಚಾರವನ್ನು ಮೊಟಕುಗೊಳಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಪರ ಮತಯಾಚನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ದಿಂಡಾವರ ಗ್ರಾಮಕ್ಕೆ ತೆರಳಿದ್ದರು. ಸಚಿವರ ಕಾರನ್ನು ಗ್ರಾಮದಲ್ಲಿ ತಡೆದ ಜನರು ಕುಡಿಯುವ ನೀರು ಪೂರೈಕೆ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

ADVERTISEMENT

ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಟ್ಯಾಂಕರ್‌ ಮೂಲಕ ಪೂರೈಕೆ ಮಾಡುವ ನೀರು ಸಾಕಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಪೂರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಗ್ರಾಮದ ಕೆರೆಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ನೀರು ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.