ADVERTISEMENT

ಸಾರ್ವಜನಿಕರ ಅಹವಾಲು ಆಲಿಸಿದ ಸಚಿವ ಡಿ.ಸುಧಾಕರ್‌: ಹಲವರಿಗೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 13:41 IST
Last Updated 19 ನವೆಂಬರ್ 2024, 13:41 IST
ಹಿರಿಯೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು
ಹಿರಿಯೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು   

ಹಿರಿಯೂರು: ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಸೋಮವಾರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಓದಲು, ಬರೆಯಲು ಬಾರದ ಹಲವರು ಇತರರಿಂದ ಅರ್ಜಿಗಳನ್ನು ಬರೆಸಿಕೊಂಡು ಬಂದು ಸಚಿವರಿಗೆ ನೀಡಿ ಅಳಲು ತೋಡಿಕೊಂಡರು. ಈ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

‘ಪತಿಗೆ ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ’ ಎಂದು ರೋಜಾ ಅವರು ಮನವಿ ಮಾಡಿದರೆ, ಹರಿಶ್ಚಂದ್ರಘಾಟ್ ಬಡಾವಣೆಯ ತಿಪ್ಪಮ್ಮ, ‘ಸರ್ ನನ್ನ ಬಳಿ ಮೊಬೈಲ್ ಇಲ್. ಆದಕಾರಣ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಆಗಿಲ್ಲ’ ಎಂದು ಬೇಸರ ತೋಡಿಕೊಂಡರು. ‘ಶಾಲೆಯಲ್ಲಿ ಮಕ್ಕಳು ಪ್ರವಾಸ ಹೊರಟಿದ್ದಾರೆ. ನನ್ನ ಬಳಿ ಹಣವಿಲ್ಲದ ಕಾರಣ ಮಗಳನ್ನು ಕಳುಹಿಸಲು ಆಗಲಿಲ್ಲ. ಮನೆಯಲ್ಲಿ ಕೂತು ಅಳುತ್ತಿದ್ದಾಳೆ’ ಎಂದು ಕಮಲಮ್ಮ ಅಳಲು ತೋಡಿಕೊಂಡರು. ಮತ್ತೆ ಕೆಲವರು ಬಿಪಿಎಲ್ ಕಾರ್ಡ್‌ ರದ್ದಾಗಿರುವ ಕುರಿತು, ಮತ್ತೆ ಕೆಲವರು ನಿವೇಶನ ಬೇಕು, ಮನೆ ಮಂಜೂರು ಮಾಡಿಸಿ, ಮದುವೆಗೆ ಸಹಾಯ ಮಾಡಿ ಎಂದು ಅರ್ಜಿ ಹಿಡಿದು ಬಂದಿದ್ದರು.

ADVERTISEMENT

ಪತಿಗೆ ಚಿಕಿತ್ಸೆ ಕೊಡಿಸುವಂತೆ ರೋಜಾ ಅವರಿಗೆ ₹ 5,000, ಮೊಬೈಲ್ ಖರೀದಿಸಲು ತಿಪ್ಪಮ್ಮನಿಗೆ ₹ 5,000 ವನ್ನು ಸಚಿವರು ನೀಡಿದರು. ಮಗಳನ್ನು ಪ್ರವಾಸಕ್ಕೆ ಕಳುಹಿಸುವಂತೆ ಕಮಲಮ್ಮನಿಗೂ ಹಣ ನೀಡಿದರು. ವಸತಿರಹಿತರ ಪಟ್ಟಿಯಲ್ಲಿದ್ದರೆ ನಿವೇಶನ, ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ಆರೋಗ್ಯದ ಸಮಸ್ಯೆ ಇರುವವರು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಇಲ್ಲಿ ಆಗದಿದ್ದರೆ ಆಂಬುಲೆನ್ಸ್‌ ಮೂಲಕ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಬಿಪಿಎಲ್ ಕಾರ್ಡ್‌ ಹೊಂದಿರುವವರು ಬೆಂಗಳೂರು ಹಾಗೂ ವಿವಿಧೆಡೆಯ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಸಾಲ ಮಾಡಿ ಮದುವೆ ಮಾಡುವ ಬದಲು ಸರಳವಾಗಿ ಮದುವೆ ಮಾಡಿ ವಧು–ವರರನ್ನು ಆಶೀರ್ವದಿಸಿ. ದುಡಿಯುವ ಹಣದಲ್ಲಿ ಅಲ್ಪಭಾಗವನ್ನು ಆಸ್ಪತ್ರೆ, ಮಕ್ಕಳ ಶಿಕ್ಷಣ, ಮದುವೆಯಂತಹ ಖರ್ಚುಗಳಿಗೆ ಉಳಿಸಿ ಎಂದು ಸುಧಾಕರ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.