ADVERTISEMENT

ವಿವೇಚನಾ ಕೋಟಾ ಹೆಸರಿನಲ್ಲಿ ಭೋವಿ ನಿಗಮದ ಅನುದಾನವನ್ನು ದುರ್ಬಳಕೆ: ಗೂಳಿಹಟ್ಟಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 23:55 IST
Last Updated 8 ಜೂನ್ 2024, 23:55 IST
ಗೂಳಿಹಟ್ಟಿ ಶೇಖರ್
ಗೂಳಿಹಟ್ಟಿ ಶೇಖರ್   

ಹೊಸದುರ್ಗ: ‘ವಿವೇಚನಾ ಕೋಟಾ ಹೆಸರಿನಲ್ಲಿ ಭೋವಿ ಅಭಿವೃದ್ಧಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದು ಯಾವ ಸಚಿವರ ಅವಧಿಯಲ್ಲಿ ಆಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮತ್ತೆ ಆರೋಪಿಸಿದ್ದಾರೆ.

‘ಭೋವಿ ನಿಗಮಕ್ಕೆ 2018-19ರಲ್ಲಿ ₹127 ಕೋಟಿ, 2019-20ರಲ್ಲಿ ₹119 ಕೋಟಿ ಹಣ ಬಂದಿತ್ತು. 2020-21ನೇ ಸಾಲಿನಲ್ಲಿ ₹106 ಕೋಟಿ, 2021-22ರಲ್ಲಿ ₹40 ಕೋಟಿ, 2022-23ರಲ್ಲಿ ₹107 ಕೋಟಿ ಸೇರಿ ಈವರೆಗೆ ಒಟ್ಟು ₹499 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ವಿವೇಚನಾ ಕೋಟಾದ ಹೆಸರಿನಲ್ಲಿ ನಿಯಮ ಮೀರಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಆಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಿಗಮದ ಅನುದಾನದಲ್ಲಿ ವಾಹನ, ವ್ಯಾಪಾರ, ಉದ್ಯೋಗಕ್ಕಾಗಿ ಸಾಲ, ಗಂಗಾಕಲ್ಯಾಣ, ಭೂ ಒಡೆತನ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗಾಗಿ ಹಣವನ್ನು ಮೀಸಲಿಡಲಾಗುತ್ತದೆ. ಆದರೆ, ಅನಿಕಾ ಎಂಟರ್‌ ಪ್ರೈಸಸ್‌ಗೆ ₹1.94 ಕೋಟಿ ಹಾಗೂ ಸಾಯಿ ಥೆರಪಿಸ್ಟ್‌ ಸಂಸ್ಥೆಗೆ ₹1.78 ಕೋಟಿ ಹಣ ನೀಡಲಾಗಿದೆ. ಈ ಸಂಸ್ಥೆಗಳ ವಿವರ ಹಾಗೂ ಯಾವ ಉದ್ದೇಶಕ್ಕೆ ಅನುದಾನ ನೀಡಲಾಯಿತು ಎಂಬುದಕ್ಕೆ ಉತ್ತರ ಸಿಗಬೇಕಿದೆ’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗೆ ವಿವೇಚನಾ ಕೋಟಾದಡಿ ₹20 ಕೋಟಿ ನೀಡಲಾಗಿದೆ. ಕಿರಾಣಿ ಅಂಗಡಿಗೆ ನೀಡುವ ಸಾಲದಲ್ಲಿ ಫಲಾನುಭವಿ ಹೆಸರು ತೋರಿಸಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಮತ್ತು ಎಂಜಿನಿಯರ್‌ಗಳನ್ನು ವ್ಯವಸ್ಥಾಪಕರನ್ನಾಗಿ ಮಾಡಲಾಗಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ಮಾತ್ರ ಹೀಗೆ ನಡೆದಿದ್ದಲ್ಲ. ಎಲ್ಲ ನಿಗಮಗಳಲ್ಲಿ ಕೂಡ ಇಂತಹ ಅಕ್ರಮಗಳು ನಡೆದಿವೆ. ನಿಗಮದ ಅಕ್ರಮಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪೂಜಾರಿ ಮೇಲೆ ಗೌರವ ಇದೆ’
‘ನಾನು ಹಿಟ್‌ ಅಂಡ್‌ ರನ್‌ ಮಾಡುವವನಲ್ಲ. ಯಾರ ಮೇಲೂ ಆರೋಪ ಮಾಡುವುದಿಲ್ಲ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಅಪಾರ ಗೌರವ ಇದೆ’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ‘ಯಾರನ್ನೂ ಅವಮಾನಿಸುವ ರೀತಿಯಲ್ಲಿ ನಾನು ಮಾತನಾಡಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗ ಕ್ಷಮೆ ಕೇಳುವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.