ಹೊಳಲ್ಕೆರೆ: ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ವಿಶ್ವಮಟ್ಟದಲ್ಲಿ ಹೆಸರು, ಹಣ ಸಂಪಾದಿಸಬಹುದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಆಗ ಮಾತ್ರ ಯಶಸ್ಸು ಸಿಗಲು ಸಾಧ್ಯ. ಕನ್ನಡ, ತೆಲುಗು, ಹಿಂದಿ ಚಿತ್ರನಟರು ದೇಶಕ್ಕಷ್ಟೇ ಗೊತ್ತಿರುತ್ತಾರೆ. ಆದರೆ, ಕ್ರೀಡಾಪಟುಗಳು ಇಡೀ ವಿಶ್ವಕ್ಕೇ ತಿಳಿದಿರುತ್ತಾರೆ. ಕ್ರೀಡೆಗೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.
ಭಾರತದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಆದರೆ, ಕ್ರೀಡಾಪಟುಗಳಿಗೆ ತರಬೇತಿ, ಪ್ರೋತ್ಸಾಹದ ಕೊರತೆಯಿಂದ ಒಲಿಂಪಿಕ್ಸ್‌ನಂತಹ ಕ್ರೀಡೆಗಳಲ್ಲಿ ಕಳಪೆ ಸಾಧನೆ ಮಾಡಲಾಗುತ್ತಿದೆ. ಸರ್ಕಾರ ಕ್ರೀಡೆಗೆ ಹೆಚ್ಚು ಮಹತ್ವ ಕೊಡಬೇಕು. ಕ್ರೀಡಾಪಟುಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಶಿವಮೂರ್ತಿ ನಾಯ್ಕ, ದಾವಣಗೆರೆ ವಿಶ್ವವಿದ್ಯಾಲಯದ ಕ್ರೀಡಾಧಿಕಾರಿ ವೀರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಸಿ.ಮೋಹನ್, ಕರಿಸಿದ್ದಯ್ಯ ಒಡೆಯರ್, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.