ADVERTISEMENT

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಮೇ 2024, 13:22 IST
Last Updated 24 ಮೇ 2024, 13:22 IST
ಬಿ.ಪಿ.ತಿಪ್ಪೇಸ್ವಾಮಿ
ಬಿ.ಪಿ.ತಿಪ್ಪೇಸ್ವಾಮಿ   

ಹಿರಿಯೂರು: ‘ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಲ್ಲ ಪಿಂಚಣಿ ವಂಚಿತ ನೌಕರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು’ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

‘ಬಿಜೆಪಿ ಆಡಳಿತದಲ್ಲಿ ನಮ್ಮ ಪಿಂಚಣಿ, ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಸುದೀರ್ಘ ಹೋರಾಟ ನಡೆಸಿದ್ದೆವು. ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಮ್ಮ ಹೋರಾಟಕ್ಕೆ ಬೆಂಬಲ ನೀಡಿತ್ತು. ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿತ್ತು. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಹಳೆಯ ನಿಶ್ಚಿತ ಪಿಂಚಣಿ ಜಾರಿಯ ಕುರಿತು ಹಲವು ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ನಮ್ಮ ಸಂಧ್ಯಾ ಕಾಲದ ನೆಮ್ಮದಿಯ ಬದುಕಿಗೆ ಅಗತ್ಯ ಇರುವ ನಿಶ್ಚಿತ ಪಿಂಚಣಿ ಬೇಡಿಕೆ ಈಡೇರಿಸುವವರ ಪರವಾಗಿರುವ ಮೂಲಕ ನಮ್ಮ ಪ್ರಾಮಾಣಿಕತೆ, ನೈತಿಕತೆ ಪ್ರದರ್ಶಿಸಬೇಕಿದೆ ಎಂದು ರಾಜ್ಯ ಸಂಘ ನಿರ್ಣಯಿಸಿದೆ. ಈ ನಿರ್ಣಯಕ್ಕೆ ನಮ್ಮ ಸಹಮತವಿದೆ. ಆಯಾ ಜಿಲ್ಲೆಗಳ ನೌಕರರ ಮನವೊಲಿಸುವ ಜವಾಬ್ದಾರಿಯನ್ನು ಎಲ್ಲ ಪದಾಧಿಕಾರಿಗಳು ತೆಗೆದುಕೊಳ್ಳಬೇಕೆಂದು ರಾಜ್ಯ ಸಮಿತಿ ಸೂಚಿಸಿರುವುದರಿಂದ  ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬೆಂಬಲಿಸಬೇಕು’ ಎಂದಿದ್ದಾರೆ.

ADVERTISEMENT

‘ಜೀವನ ಭದ್ರತೆ ಹಾಗೂ ಸಂವಿಧಾನ ರಕ್ಷಿಸುವ ಜವಾಬ್ದಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದು ಬಿಟ್ಟು ಅನ್ಯ ಮಾರ್ಗವಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಹಳೆಯ ನಿಶ್ಚಿತ ಪಿಂಚಣಿ ಪಡೆಯುವ ನಿಟ್ಟಿನಲ್ಲಿ ಜೂನ್ ನಂತರ ಬೃಹತ್ ಹೋರಾಟಕ್ಕೆ ನಿರ್ಧರಿಸಲಾಗುವುದು’ ಎಂದು ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.