ಮೊಳಕಾಲ್ಮುರು: 'ಶಾಶ್ವತ ನೆಮ್ಮದಿ ತಾಣ' ಎಂದೇ ಕರೆಯಲಾಗುವ ಸ್ಮಶಾನಗಳು ತಾಲ್ಲೂಕಿನಲ್ಲಿ ನಿರ್ಲಕ್ಷ್ಯದಿಂದಾಗಿ ‘ಹಿಡಿಶಾಪ’ ಹಾಕುವ ಸ್ಥಳಗಳಾಗಿ ಮಾರ್ಪಟ್ಟಿವೆ.
ಕಸಬಾ ಮತ್ತು ದೇವಸಮುದ್ರ ಎರಡು ಹೋಬಳಿಯನ್ನು ಹೊಂದಿರುವ ತಾಲ್ಲೂಕಿನಲ್ಲಿ 93 ಗ್ರಾಮಗಳಿದ್ದು, ಹತ್ತಾರು ವರ್ಷಗಳ ಬೇಡಿಕೆ ನಂತರ ವರ್ಷದ ಹಿಂದಷ್ಟೇ ಕೆಲವು ಗ್ರಾಮಗಳಿಗೆ ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಲಾಗಿದೆ.
ಈ ಭಾಗದಲ್ಲಿ ಬುಡಕಟ್ಟು ಜನರು ಹೆಚ್ಚಾಗಿ ವಾಸವಿದ್ದು, ಕೆಲವೆಡೆ ಪ್ರತ್ಯೇಕ ಸ್ಥಳ ನೀಡುವಂತೆ ಮನವಿ ಕೇಳಿಬಂದಿದೆ. ಈಚೆಗೆ ಪಟ್ಟಣದಲ್ಲಿ ಈ ಸಂಸ್ಕೃತಿಯ ಪೂಜಾರಿಯೊಬ್ಬರು ಮೃತಪಟ್ಟಾಗ ಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳವಿಲ್ಲ ಎಂಬ ಕಾರಣದಿಂದ ಒಂದು ದಿನ ಶವವಿಟ್ಟು ಪ್ರತಿಭಟನೆ ಮಾಡಲಾಗಿತ್ತು.
‘ತಾಲ್ಲೂಕಿನ 32 ಗ್ರಾಮದವರು ಸ್ಮಶಾನಕ್ಕೆ ಸ್ಥಳವಿರಲಿಲ್ಲ ಎಂಬ ದೂರು ನೀಡಿದ್ದರು. ಈಚೆಗೆ ಸ್ಥಳೀಯವಾಗಿ ಸರ್ಕಾರ ಜಾಗ ನೀಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರಿಂದ, ಆ ಪೈಕಿ 30 ಗ್ರಾಮಗಳಿಗೆ ಸ್ಥಳೀಯ ಸರ್ಕಾರಿ ಜಾಗದಲ್ಲಿ ಭೂಮಿ ಒದಗಿಸಲಾಗಿದೆ. ಬೊಮ್ಮದೇವರಹಳ್ಳಿ ಮತ್ತು ಹಿರೇಕೆರೆಹಳ್ಳಿಯಲ್ಲಿ ಸ್ಥಳವಿಲ್ಲದಿದ್ದರಿಂದ ₹ 34 ಲಕ್ಷ ವೆಚ್ಚದಲ್ಲಿ ತಲಾ 2 ಎಕರೆ ಭೂಮಿ ಖರೀದಿಸಿ ನೀಡಲಾಗಿದೆ‘ ಎಂದು ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ತಿಳಿಸಿದರು.
‘ಪ್ರತ್ಯೇಕ ಸ್ಥಳ ಅಥವಾ ಸ್ಮಶಾನ ಅಭಿವೃದ್ಧಿಗಾಗಿ ಯಾವುದೇ ಅರ್ಜಿಗಳು ಬಂದಿಲ್ಲ. ಸ್ಮಶಾನಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಬೇಕಿದ್ದು, ಶೀಘ್ರವೇ ಪಟ್ಟಿ ಮಾಡಿ ಹಸ್ತಾಂತರಿಸಲಾಗುವುದು’ ಎಂದರು.
‘ಸ್ಮಶಾನಗಳ ಅಭಿವೃದ್ಧಿಗೆ ಯಾವುದೇ ಪಂಚಾಯಿತಿಗಳಲ್ಲಿ ಕ್ರಿಯಾಯೋಜನೆ ಸಿದ್ಧವಿಲ್ಲ. ಉದ್ಯೋಗ ಖಾತ್ರಿ ಯೋಜನೆ ಅಡಿ ಶಾಲೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಕ್ರಿಯಾಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗುವುದು. ಇದಕ್ಕಾಗಿ ಪಿಡಿಒಗಳ ಸಭೆ ಕರೆಯಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಕೆ.ಈ. ಜಾನಕೀರಾಮ್ ಹೇಳಿದರು.
‘ಮುಸ್ಲಿಮರ ಖಬರಸ್ಥಾನಗಳು ಸ್ವಚ್ಛವಾಗಿವೆ. ಕಾಪೌಂಡ್, ಸಂಪರ್ಕ ರಸ್ತೆ, ನೀರಿನ ವ್ಯವಸ್ಥೆ ಚೆನ್ನಾಗಿದೆ. ಆದರೆ ಹಿಂದೂಗಳ ಸ್ಮಶಾನಗಳಿಗೆ ತೆರಳಲು ರಸ್ತೆ ಇಲ್ಲ. ಮುಳ್ಳಿನ ಗಿಡ–ಗಂಟಿಗಳನ್ನು ಸರಿಸಿಕೊಂಡು ಹೋಗಬೇಕಿದೆ. ಕೂರಲು ಅನುಕೂಲವಿಲ್ಲ. ನೀರಿನ ಸಂಪರ್ಕವಿಲ್ಲದ ಪರಿಣಾಮ ಸಮೀಪದ ತೋಟಗಳಿಗೆ ಹೋಗಿ ಕೈಕಾಲು ತೊಳೆಯಬೇಕಿದೆ. ಸಂಸ್ಕಾರಕ್ಕೆ ಹೋದಾಗ ಮಾತ್ರ ಸ್ಮಶಾನ ಅಭಿವೃದ್ಧಿ ಮಾತುಗಳು ಕೇಳಿಬರುತ್ತವೆ. ನಂತರ ಈ ಬಗ್ಗೆ ಜನರಾಗಲೀ, ಪಂಚಾಯಿತಿಯವರಾಗಲೀ ತಲೆಕೆಡಿಸಿಕೊಳ್ಳದ ಕಾರಣ ಸಮಸ್ಯೆಗಳು ಜೀವಂತವಾಗಿವೆ’ ಎಂದು ಕೊಂಡ್ಲಹಳ್ಳಿಯ ತಿಪ್ಪೇಸ್ವಾಮಿ, ಹಾಗೂ ಮಾರಪ್ಪ ತಿಳಿಸಿದರು.
ಸ್ಮಶಾನಗಳಿಗೆ ತೆರಳಲು ರಸ್ತೆಯೇ ಇಲ್ಲ
‘ಪಟ್ಟಣದ ಎಲ್ಲ ಸ್ಮಶಾನಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಂಸ್ಕಾರ ವೇಳೆಯಲ್ಲಿ ಟ್ಯಾಂಕರ್ ಕಳುಹಿಸಲಾಗುತ್ತಿದೆ. ಮಾರುತಿ ಬಡಾವಣೆ, ದಾಸರಹಟ್ಟಿ, ಕುರಾಕಲಹಟ್ಟಿ ಸ್ಮಶಾನಗಳಿಗೆ ಹೋಗಲು ರಸ್ತೆಯೇ ಇಲ್ಲ. ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ ಸ್ಮಶಾನದಲ್ಲಿ ಶವವನ್ನು ಸುಟ್ಟಾಗ ವಿಪರೀತ ವಾಸನೆ ಬಂದು ಸಮೀಪದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಿದೆ’ ಎಂದು ತಿಪ್ಪೇಸ್ವಾಮಿ ಹೇಳಿದರು.
ಕೊಂಡ್ಲಹಳ್ಳಿಯಲ್ಲಿ ಜಾಗದ ಕೊರತೆ
‘ದೊಡ್ಡ ಗ್ರಾಮವಾದ ಕೊಂಡ್ಲಹಳ್ಳಿಯಲ್ಲಿ ಶವಗಳನ್ನು ಹೂಳಲು ಜಾಗದ ಕೊರತೆ ಇದೆ. ಇದರಿಂದಾಗಿ ಬಹಳ ಹಿಂದೆ ಹೂಳಲಾದ ಶವಗಳ ಅಸ್ತಿ ಪಂಜರಗಳನ್ನು ತೆಗೆದು ಮತ್ತೊಂದು ಶವ ಹೂಳಬೇಕಾದ ಪರಿಸ್ಥಿತಿ ಇದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ’ ಎಂದು ಕೊಂಡ್ಲಹಳ್ಳಿಯ ಮಾರಪ್ಪ ಅವರು ದೂರಿದರು.
****
ಪಟ್ಟಣದ ಸ್ಮಶಾನಗಳ ಅಭಿವೃದ್ಧಿಗೆ 15 ನೇ ಹಣಕಾಸು ಯೋಜನೆಯಲ್ಲಿ ಅನುದಾನ ಮೀಸಲಿಗೆ ಕೋರಲಾಗುವುದು. ಸರ್ಕಾರದ ಮಾನದಂಡಗಳು ಕೆಲವು ಬಾರಿ ಅಡ್ಡಿಯಾಗುತ್ತಿವೆ.
- ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.