ADVERTISEMENT

ರೌಡಿಗಳಿಗೆ ಸಿಗುತ್ತಿದೆ ಸರ್ಕಾರದ ಸಹಾಯ: ಸಂಸದ ಕಾರಜೋಳ ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:02 IST
Last Updated 27 ಆಗಸ್ಟ್ 2024, 16:02 IST
ಚಿತ್ರದುರ್ಗದ ಜಗಲೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಜಿಲ್ಲಾ ಕಾರ್ಯಾಗಾರವನ್ನು ಸಂಸದ ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು
ಚಿತ್ರದುರ್ಗದ ಜಗಲೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಜಿಲ್ಲಾ ಕಾರ್ಯಾಗಾರವನ್ನು ಸಂಸದ ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು   

ಚಿತ್ರದುರ್ಗ: ರಾಜ್ಯದಲ್ಲಿ ಈಗ ದರಿದ್ರ ಸರ್ಕಾರವಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ದೂರಿದರು.

ನಗರದ ಜಗಲೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಇವರನ್ನು ನಿಯಂತ್ರಿಸಬೇಕಿದ್ದ ಸರ್ಕಾರ ಅವರಿಗೆ ಸಹಾಯ ಮಾಡುತ್ತಿದೆ. ಇದಕ್ಕೆ ಪರಪ‍್ಪನ ಅಗ್ರಹಾರದ ಘಟನೆ ನಿದರ್ಶನ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತಾನಾಗಿಯೇ ಬೀಳುತ್ತದೆ. ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸವನ್ನು ಮಾಡಬೇಕಿದೆ. ನಮ್ಮೆಲ್ಲರಿಗೂ ಪಕ್ಷ ತಾಯಿ ಇದ್ದಂತೆ ಅದಕ್ಕೆ ದ್ರೋಹ ಮಾಡದೇ ಆತ್ಮ ವಿಶ್ವಾಸದಿಂದ ನಿಯೋಜಿಸಿದ ಜವಬ್ದಾರಿ ನಿರ್ವಹಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿದ್ದು, ಇದಕ್ಕೆ ಪೂರಕವಾಗಿ ಪಕ್ಷ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದೆ. ದೇಶದಲ್ಲಿ 10 ಕೋಟಿ ಸದಸ್ಯತ್ವದ ಗುರಿ ಹೊಂದಲಾಗಿದೆ. ಪ್ರತಿ ಬೂತ್‍ನಲ್ಲಿ ಕನಿಷ್ಠ 300 ಜನರನ್ನು ಸದಸ್ಯರನ್ನಾಗಿ ಮಾಡಬೇಕಿದೆ’ ಎಂದರು.

‘2018ರಲ್ಲಿ 8 ಕೋಟಿ ಜನರನ್ನು ಸದಸ್ಯರನ್ನಾಗಿ ಮಾಡಲಾಗಿತ್ತು. ಈಗ 10 ಕೋಟಿ ಗುರಿ ನೀಡಲಾಗಿದೆ. ಇದರ ಬಗ್ಗೆ ಎಲ್ಲರು ಶ್ರಮಿಸಬೇಕಿದೆ. ಹೊಳಲ್ಕೆರೆಯಲ್ಲಿ 80 ಸಾವಿರ ಜನರನ್ನು ಸದಸ್ಯರನ್ನಾಗಿ ಮಾಡಿದ್ದರರಿಂದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಯಿತು’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್‌, ಸುರೇಶ್‌ ಸಿದ್ದಾಪುರ, ಸದಸ್ಯತ್ವ ಅಭಿಯಾನದ ಸಂಚಾಲಕರಾದ ಸಂಪತ್‌ ಕುಮಾರ್‌, ಸಹ ಸಂಚಾಲಕರಾದ ಮಲ್ಲಿಕಾರ್ಜುನ್‌, ರೂಪ ಸುರೇಶ್‌, ಮಂಜುನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.