ADVERTISEMENT

ಪತ್ನಿಯ ತಪ್ಪಿದ್ದರೆ ಸಿ.ಎಂಗೆ ಏಕೆ ಶಿಕ್ಷೆ: ಶಾಸಕ ನರೇಂದ್ರಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:50 IST
Last Updated 19 ಅಕ್ಟೋಬರ್ 2024, 15:50 IST
ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಸಂಸ, ಮಾದಿಗ ಮಹಾಸಭಾ ಸದಸ್ಯರು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು
ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಸಂಸ, ಮಾದಿಗ ಮಹಾಸಭಾ ಸದಸ್ಯರು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು   

ಚಿತ್ರದುರ್ಗ: ‘ಪತ್ನಿಗೆ ನಿವೇಶನ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾಗೆ ಪತ್ರ ನೀಡಿಲ್ಲ. ಎಲ್ಲೂ ಶಿಫಾರಸು ಮಾಡಿಲ್ಲ. ಮುಡಾ ಕೂಡ 14 ನಿವೇಶನಗಳನ್ನು ಸಿದ್ದರಾಮಯ್ಯ ಅವರಿಗೆ ಕೊಟ್ಟಿಲ್ಲ. ಒಂದು ವೇಳೆ ಪತ್ನಿಯದ್ದು ತಪ್ಪಿದ್ದರೆ ಸಿದ್ದರಾಮಯ್ಯ ಅವರಿಗೆ ಏಕೆ ಶಿಕ್ಷೆ ವಿಧಿಸಬೇಕು’ ಎಂದು ವಿಧಾನಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನಿಸಿದರು. 

‘ಬಿಜೆಪಿ ಮುಖಂಡರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅವರು ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ರಾಜಕೀಯ ಷಡ್ಯಂತ್ರಕ್ಕೆ ನಾವು ತಲೆ ಬಾಗುವುದಿಲ್ಲ. ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ’ ಎಂದು ಸುದ್ದಿಗಾರರಿಗೆ ಶನಿವಾರ ಹೇಳಿದರು. 

‘ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣವನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಲು ನೋಡುತ್ತಿದ್ದಾರೆ. ಬಿಜೆಪಿಯವರೇನು ಸತ್ಯಸಂಧರಾ? ಅವರ ಅವಧಿಯ ಹಗರಣಗಳ ತನಿಖೆಗೆ ರಾಜ್ಯಪಾಲರು ಏಕೆ ಅನುಮತಿ ನೀಡಿಲ್ಲ? ಭೋವಿ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಬಗ್ಗೆ ಆ ಪಕ್ಷದ ಮುಖಂಡರು ಮಾತನಾಡುವುದಿಲ್ಲ. ನಮ್ಮ ಸಂಖ್ಯೆ 136 ಇದ್ದು, ಬಿಜೆಪಿಯವರ ಆಟ ನಡೆಯುವುದಿಲ್ಲ’ ಎಂದರು.

ADVERTISEMENT

‘ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ, ಅವರು ಎಲ್ಲಾ ಪಾತ್ರಗಳನ್ನು ಮಾಡುತ್ತಾರೆ. ಅನಿವಾರ್ಯವಾಗಿ ಬಿಜೆಪಿ ಜೊತೆ ಜಾಗ ಹುಡುಕಿಕೊಂಡು ಹೋಗಿದ್ದಾರೆ. ಈಗ ಅವರು ಬಿಜೆಪಿಯ ಮುಖವಾಣಿಯಾಗಿದ್ದಾರೆ. ಇನ್ನೂ ಮುಖ್ಯಮಂತ್ರಿಯಾಗುವ ಭ್ರಮಯಲ್ಲೇ ಇದ್ದಾರೆ. ಆ ಭ್ರಮೆ ನಿರಸನವಾಗುತ್ತದೆ. ಜಿಎಸ್‌ಟಿ ಪಾಲು ನೀಡುವಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ’ ಎಂದು ಸವಾಲು ಹಾಕಿದರು.

‘ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಅರಿಯಬೇಕಾದರೆ ಸಾಮಾಜಿಕ– ಆರ್ಥಿಕ ಸಮೀಕ್ಷಾ ವರದಿ ಜಾರಿಯಾಗಬೇಕು. ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಹಳೆಯ ವರದಿಯನ್ನೇ ಜಾರಿ ಮಾಡಬೇಕಾ ಅಥವಾ ಹೊಸದಾಗಿ ಸಮೀಕ್ಷೆ ನಡೆಸಬೇಕಾ ಎಂಬ ಬಗ್ಗೆ ಚರ್ಚೆಯಾಗಲಿ’ ಎಂದು ಹೇಳಿದರು. 

Cut-off box - ಸಭೆಗೆ ಮುತ್ತಿಗೆ ಹಾಕಲು ಯತ್ನ ಪಿ.ಎಂ.ನರೇಂದ್ರಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಸ್‌ಸಿ ಎಸ್‌ಟಿ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಈ ವೇಳೆ ದಲಿತ ಸಂಘರ್ಷ ಸಮಿತಿ ಮಾದಿಗ ಮಹಾಸಭಾ ಸದಸ್ಯರು ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಅವರನ್ನು ಒಳಗೆ ಬಿಡಲಿಲ್ಲ. ಆಗ ಪೊಲೀಸರು ಹಾಗೂ ಸಂಘಟನೆ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನರೇಂದ್ರಸ್ವಾಮಿ ಅವರು ಸಭೆ ಮುಗಿಸಿ ಹೊರಬಂದಾಗ ಸಂಘಟನೆಗಳ ಸದಸ್ಯರು ಮುತ್ತಿಗೆ ಹಾಕಲು ಮುಂದಾದರು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಗ ನರೇಂದ್ರಸ್ವಾಮಿ ಪ್ರತಿಭಟನಕಾರರ ಅಹವಾಲು ಆಲಿಸಿದರು. ‘ಒಳಮೀಸಲಾತಿ ಜಾರಿಯಾಗಲೇಬೇಕು ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಸಂಬಂಧ ನಮ್ಮ ಸರ್ಕಾರದಲ್ಲಿ ವಿರೋಧವಿದೆ ಎಂಬುದು ಊಹಾಪೋಹ. ಅ.21ರಂದು ಈ ಕುರಿತು ಸಭೆ ನಡೆಯಲಿದೆ. ಒಳ ಮೀಸಲಾತಿಯನ್ನು ಸಾಂವಿಧಾನಿಕವಾಗಿ ಅಳವಡಿಸುವ ಅವಶ್ಯಕತೆ ಇದೆ. ಅದಕ್ಕೆ ಅಂಕಿ–ಅಂಶಗಳ (ಎಂಪರಿಕಲ್‌ ಡೇಟಾ) ಅಗತ್ಯವಿದ್ದು ಅವುಗಳನ್ನು ತರಿಸಿ ಒಳ ಮೀಸಲಾತಿ ಜಾರಿಗೊಳಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.