ADVERTISEMENT

ಮುರುಘಾ ಮಠದಲ್ಲಿ ಕಾಣದ ಭಕ್ತರ ಸಂಭ್ರಮ: ಪೊಲೀಸ್‌ ಭದ್ರತೆಯಲ್ಲಿ ಶೂನ್ಯ ಪೀಠಾರೋಹಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 11:33 IST
Last Updated 25 ಅಕ್ಟೋಬರ್ 2023, 11:33 IST
<div class="paragraphs"><p>ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ಮುರುಗಿ ಶಾಂತವೀರ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಇಟ್ಟು ಶೂನ್ಯಪೀಠಾರೋಹಣ ನೆರವೇರಿಸಲಾಯಿತು</p></div>

ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ಮುರುಗಿ ಶಾಂತವೀರ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಇಟ್ಟು ಶೂನ್ಯಪೀಠಾರೋಹಣ ನೆರವೇರಿಸಲಾಯಿತು

   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶೂನ್ಯಪೀಠದಲ್ಲಿ ಬುಧವಾರ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಮುರುಗಿ ಶಾಂತವೀರ ಸ್ವಾಮೀಜಿ‌ ಅವರ ಕಂಚಿನ ಪುತ್ಥಳಿ ಇಟ್ಟು ಸಾಂಪ್ರದಾಯಿಕವಾಗಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.

ಪೀಠಾರೋಹಣ ಸಮಯದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ ಎಂದು ಎಸ್‌ಜೆಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್‌ ಕುಮಾರ್‌ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅದರರಂತೆ ಮಠದ ಆವರಣದಲ್ಲಿ ನಿಷೇದಾಜ್ಞೆ ವಿಧಿಸಿದ್ದ ಕಾರಣ ಪೀಠವಿರುವ ಮಠದ ರಾಜಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು.

ADVERTISEMENT

ಶರಣ ಸಂಸ್ಕೃತಿ ಉತ್ಸವದಲ್ಲಿ ಮುರುಘಾ ಮಠದ ಪೀಠಾಧ್ಯಕ್ಷರು ಶೂನ್ಯಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ನೀಡುವುದು ವಾಡಿಕೆ. ಆದರೆ, ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವುದರಿಂದ ಮಠದ ಕರ್ತೃ ಮುರುಗಿ ಶಾಂತವೀರ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಇಟ್ಟು ಪೀಠಾರೋಹಣ ವಿಧಿ–ವಿಧಾನಗಳನ್ನು ಪೂರೈಸಲಾಯಿತು.

ಮಠದ ರಾಜಾಂಗಣದಲ್ಲಿರುವ ಪೀಠವನ್ನು ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬಂಗಾರದ ಕೀರಿಟ, ಬಂಗಾರದ ಪಾದುಕೆ ಹಾಗೂ ಬಂಗಾರದ ರುದ್ರಾಕ್ಷಿ ಸರವನ್ನು ಮಠದ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಬಿ.ಎಸ್‌.ರೇಖಾ ಸಮ್ಮುಖದಲ್ಲಿ ಗದ್ದುಗೆಗೆ ತಂದು ಪೂಜೆ ಸಲ್ಲಿಸಲಾಯಿತು. ಬಳಿಕ ಭದ್ರತೆಯಲ್ಲಿ ರಾಜಾಂಗಣಕ್ಕೆ ತಂದು ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು. ಈ ವೇಳೆ ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮಾತ್ರ ಇದ್ದರು.

ಮಠದ ಪ್ರಾಂಗಣದಲ್ಲಿ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು. ಭಕ್ತರಿಗೆ ಅವಕಾಶ ಮಾಡಿಕೊಡದ ಪರಿಣಾಮ ಜಯಘೋಷಗಳು ಮೊಳಗಲಿಲ್ಲ. ಶೂನ್ಯಪೀಠರೋಹಣ ಕೈಂಕರ್ಯದ ಸಂದರ್ಭವನ್ನು ವಿವಿಧ ಮಠಾಧೀಶರು ದೂರದಿಂದಲೇ ವೀಕ್ಷಿಸಿದರು. ಪೀಠಾರೋಹಣದ ಕೈಂಕರ್ಯ ಮುಗಿದ ಬಳಿಕ ಶೂನ್ಯಪೀಠಕ್ಕೆ ಬಂದು ನಮಸ್ಕರಿಸಿದರು.

ಕಳೆದ ಬಾರಿ ಪೀಠದ ಮೇಲೆ ಮುರುಗಿ ಶಾಂತವೀರ ಸ್ವಾಮೀಜಿ‌ ಅವರ ಭಾವಚಿತ್ರ ಇಟ್ಟು ಪೀಠಾರೋಹಣ ನೆರವೇರಿಸಲಾಗಿತ್ತು. ಈ ಬಾರಿ ಕಂಚಿನ ಪುತ್ಥಳಿ ಇಟ್ಟಿದ್ದು ವಿಶೇಷವಾಗಿತ್ತು.

ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ

ಮುರುಘಾ ಮಠದ ಆವರಣದಲ್ಲಿ ವಚನಗಳ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಬುಧವಾರ ಸಾಂಪ್ರದಾಯಿಕವಾಗಿ ನಡೆಯಿತು. ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷ ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಪ್ರಾಚೀನ ಹಸ್ತಪ್ರತಿಗಳನ್ನು ತಲೆ ಮೇಲೆ ಹೊತ್ತು ತಂದು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು.

ಶೂನ್ಯಪೀಠಾರೋಹಣದ ಕೈಂಕರ್ಯಗಳು ಆರಂಭವಾಗುತ್ತಿದ್ದಂತೆ ಮಠದಿಂದ ಪಲ್ಲಕ್ಕಿಯನ್ನು ಹೊರತಂದು ಪುಷ್ಪಗಳಿಂದ ಸಿಂಗರಿಸಲಾಯಿತು. ಶೂನ್ಯ ಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ಹಾಗೂ ಬಸವಣ್ಣನವರ ಭಾವಚಿತ್ರ ಇರಿಸಲಾಯಿತು.

ಶೂನ್ಯ ಪೀಠಾರೋಹಣ ಮಾಡಿದ ನಂತರ ಬಸವಣ್ಣ, ಅಲ್ಲಮಪ್ರಭು ಅವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ನಡೆಸುವುದು ವಾಡಿಕೆ. ಪಲ್ಲಕ್ಕಿಯಲ್ಲಿ ಪೀಠಾಧ್ಯಕ್ಷರ ಬದಲು ವಚನಗಳ ಹಸ್ತಪ್ರತಿ ಇಟ್ಟು ಮೆರವಣಿಗೆ ಮಾಡುವುದು ಈ ಉತ್ಸವದ ವಿಶೇಷ. ಮೆರವಣಿಗೆಯ ಮುಂಭಾಗದಲ್ಲಿ ಆನೆ ಹೆಜ್ಜೆ ಹಾಕಿತು. ವಾದ್ಯ ಮೇಳಗಳೊಂದಿಗೆ ಭಕ್ತರು, ವಿವಿಧ ಮಠಾಧೀಶರು ಸಾಗಿದರು. ಪಲ್ಲಕ್ಕಿಗೆ ಹೆಗಲು ಕೊಟ್ಟು ಭಕ್ತರು ಪುನೀತರಾದರು.

ಸಾಂಪ್ರದಾಯಿಕವಾಗಿ ಶೂನ್ಯ ಪೀಠಾರೋಹಣ ನೆರವೇರಿಸಲಾಗಿದೆ. ಮಠದ ಆಡಳಿತಾಧಿಕಾರಿ ನೇತೃತ್ವದಲ್ಲಿ ಎಲ್ಲ ಕಾರ್ಯ ಸುಗಮವಾಗಿ ನಡೆದಿವೆ.
ಬಸವಪ್ರಭು ಸ್ವಾಮೀಜಿ, ಮುರುಘಾಮಠ
ಕೆಲ ವಿಚಾರದ ಕಾರಣಕ್ಕೆ ಶೂನ್ಯ ಪೀಠಾರೋಹಣದ ಸಮಯದಲ್ಲಿ ಸ್ವಾಮೀಜಿಗಳನ್ನು ದೂರ ಇಡಲಾಗಿತ್ತು. ಎಲ್ಲವನ್ನು ಮುರುಘೇಶನ ಪ್ರಸಾದವೆಂದು ಸ್ವೀಕರಿಸುತ್ತೇವೆ.
ಶಿವಬಸವ ಸ್ವಾಮೀಜಿ, ಗೌರವಾಧ್ಯಕ್ಷ, ಶರಣ ಸಂಸ್ಕೃತಿ ಉತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.