ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ ಸಂತ್ರಸ್ತ ಬಾಲಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಚಿಕ್ಕಪ್ಪನ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆಯ ನೆರವಿನೊಂದಿಗೆ ಮಕ್ಕಳ ರಕ್ಷಣಾಧಿಕಾರಿ ಎದುರು ಹಾಜರಾದ ಸಂತ್ರಸ್ತ ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯು ಸಂತ್ರಸ್ತೆಯ ಅಳಲು ಆಲಿಸಿ ಬಾಲನ್ಯಾಯ ಕಾಯ್ದೆಯ ಕಾಲಂ 75ರ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಮಕ್ಕಳ ರಕ್ಷಣಾಧಿಕಾರಿಗೆ ಆದೇಶಿಸಿತು.
ತಂದೆಯ ಅನಾರೋಗ್ಯದ ಕಾರಣಕ್ಕೆ ಚಿಕ್ಕಪ್ಪನ ಆಶ್ರಯದಲ್ಲಿದ್ದ ಬಾಲಕಿ ಮೇ 22ರಂದು ಮನೆ ತೊರೆದಿದ್ದಳು. ಪುತ್ರಿ ಕಾಣೆಯಾಗಿರುವ ಬಗ್ಗೆ ಮೇ 24ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಮರಳಿದ್ದ ಬಾಲಕಿ, ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರೊಂದಿಗೆ ಮಂಗಳವಾರ ಚಿತ್ರದುರ್ಗಕ್ಕೆ ಬಂದಿದ್ದರು. ಪೋಕ್ಸೊ ಪ್ರಕರಣದ ಸಾಕ್ಷ್ಯ ನುಡಿಯುವ ವೇಳೆ ಸಂತ್ರಸ್ತೆಯ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
‘ಮನೆ ತೊರೆದ ಬಾಲಕಿ ಒಡನಾಡಿ ಸೇವಾ ಸಂಸ್ಥೆಗೆ ಬಂದಿದ್ದಳು. ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ಚಿಕ್ಕಪ್ಪನ ಕಿರುಕುಳದ ಬಗ್ಗೆ ವಿವರಿಸಲಾಗಿದೆ. ಪೋಕ್ಸೊ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ. ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಸಲಾಗಿದೆ. ಹಣ, ಚಿನ್ನಾಭರಣದ ಆಮಿಷ ಒಡ್ಡಲಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು’ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.