ಚಿತ್ರದುರ್ಗ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ನಡೆಸಲಿದೆ.
ಜಾಮೀನು ಕೋರಿ ಮುರುಘಾ ಶರಣು ಆ. 29ರಂದು ಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಾಧೀಶರಾದ ಬಿ.ಕೆ. ಕೋಮಲಾ ಅವರು ರಜೆ ಮೇಲೆ ತೆರಳಿದ್ದ ಕಾರಣ ವಕೀಲರ ತಂಡ ಸಲ್ಲಿಸಿದ ಅರ್ಜಿಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಲ್ಕಣಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ತಕರಾರು ಸಲ್ಲಿಕೆಗೆ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಲಾಗಿತ್ತು.
ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆನ್ನಲಾದ ಬಾಲಕಿಯರ ಪರ ಕಾನೂನು ಹೋರಾಟ ಮಾಡಲು ಒಡನಾಡಿ ಸಂಸ್ಥೆಯು ನಿರ್ಧರಿಸಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ಮುರುಘಾ ಶರಣರಿಗೆ ನಿರೀಕ್ಷಣಾ ಜಾಮೀನು ಕೊಡಬಾರದು ಎಂದು ಕೋರಿ, ಸಂಸ್ಥೆಯ ಪರವಾಗಿ ಹೈಕೋರ್ಟ್ ವಕೀಲ ಶ್ರೀನಿವಾಸ ಅವರು ಸೆ.1ರಂದು ಚಿತ್ರದುರ್ಗ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಲಿದ್ದಾರೆ.
ಪೋಕ್ಸೊ ಕಾಯ್ದೆಯ ಅನ್ವಯ, ಸರ್ಕಾರಿ ಅಭಿಯೋಜಕರಷ್ಟೇ ಅಲ್ಲದೆ, ಸಂತ್ರಸ್ತ ಬಾಲಕಿಯರು ಮತ್ತು ಪೋಷಕರು ಹಾಗೂ ಬಾಲಕಿಯರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರು ತಕರಾರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.