ADVERTISEMENT

ಮುರುಘಾ ಮಠ: ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ; ತನಿಖೆಗೆ ಶಿಫಾರಸು

ಮುರುಘಾ ಮಠದ ಆವರಣದಲ್ಲಿ ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2024, 0:10 IST
Last Updated 9 ಮೇ 2024, 0:10 IST
ಚಿತ್ರದುರ್ಗದ ಮುರುಘಾ ಮಠದ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಪ್ರತಿಮೆಯ ಪಾದ
ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಮುರುಘಾ ಮಠದ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಪ್ರತಿಮೆಯ ಪಾದ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 375 ಅಡಿ ಎತ್ತರದ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ₹ 35 ಕೋಟಿ ಅನುದಾನಕ್ಕೆ ಅನುಗುಣವಾದ ಕಾಮಗಾರಿಯು ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ, ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಿದೆ.

‘ಬಸವೇಶ್ವರ ಪ್ರತಿಮೆಗೆ ಸರ್ಕಾರ ನೀಡಿದ ಅನುದಾನ ದುರ್ಬಳಕೆಯಾಗಿದೆ’ ಎಂದು ಆರೋಪಿಸಿ ಮಾಜಿ ಸಚಿವ ಎಚ್‌.ಏಕಾಂತಯ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಕುರಿತು ಪರಿಶೀಲನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ನೇಮಿಸಲಾಗಿತ್ತು. ಸಮಿತಿಯ ವರದಿ ಮಂಗಳವಾರ (ಮೇ 7)ದಂದು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದೆ.

‘ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ 12 ವರ್ಷಗಳಲ್ಲಿ ನಡೆದ ಕಾಮಗಾರಿ ಪ್ರಗತಿ ಸಾಧಿಸಿದ್ದು ತೀರಾ ಕಡಿಮೆ. ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕೂಡ ವಿರಳ’ ಎಂಬ ಅನುಮಾನ ಸಮಿತಿಯ ವರದಿಯಲ್ಲಿ ವ್ಯಕ್ತವಾಗಿದೆ.

ADVERTISEMENT

‘ಬಸವೇಶ್ವರ ಪ್ರತಿಮೆ ನಿರ್ಮಾಣ ಕಾರ್ಯವನ್ನು ₹ 280.2 ಕೋಟಿ ಯೋಜನಾ ವೆಚ್ಚದಲ್ಲಿ ಮುರುಘಾ ಮಠ ಕೈಗೆತ್ತಿಕೊಂಡಿದೆ. ಪೀಠಕ್ಕೆ ₹ 90.2 ಕೋಟಿ ಹಾಗೂ ಪ್ರತಿಮೆಗೆ ₹ 190 ಕೋಟಿ ವಿನಿಯೋಗಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿದೆ. ರಾಜ್ಯ ಸರ್ಕಾರ ಪ್ರತಿಮೆಗೆ 2011ರಿಂದ 2023ರವರೆಗೆ ₹ 40 ಕೋಟಿ ಅನುದಾನ ನೀಡಿದೆ. ಇದರಲ್ಲಿ ₹ 35 ಕೋಟಿಯನ್ನು ಮುರುಘಾ ಮಠಕ್ಕೆ ಹಸ್ತಾಂತರಿಸಲಾಗಿದ್ದು, ₹ 5 ಕೋಟಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ವಿಭಾಗದಲ್ಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸರ್ಕಾರ ನೀಡಿದ ಅನುದಾನದಲ್ಲಿ ಈಗಾಗಲೇ ₹ 24.5 ಕೋಟಿ ಅನುದಾನ ವೆಚ್ಚವಾಗಿರುವುದಾಗಿ ಮಠದಿಂದ ಮಾಹಿತಿ ನೀಡಲಾಗಿದೆ. ಆದರೆ, ಖರ್ಚಿನ ಬಗ್ಗೆ ನಂಬಲರ್ಹ ದಾಖಲೆಗಳು ಲಭ್ಯವಾಗಿಲ್ಲ. ಸರ್ಕಾರಿ ಅನುದಾನ ಸಮರ್ಪಕವಾಗಿ ವಿನಿಯೋಗವಾಗಿಲ್ಲದ ಕಾರಣ ಕಾಮಗಾರಿ ಫಲಪ್ರದ ಆಗದಿರುವುದು ಕಂಡುಬಂದಿದೆ. ಮಠದ ಬ್ಯಾಂಕ್‌ ಖಾತೆಯಿಂದ ಹಲವು ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಹಣ ಪಾವತಿಯಾಗಿದೆ. ಈ ವೆಚ್ಚ ಯೋಜನೆಗೆ ಸಂಬಂಧಿಸಿದ್ದೇ ಎಂಬುದು ಖಚಿತವಾಗಿಲ್ಲ’ ಎಂದು ಸಮಿತಿ ಹೇಳಿದೆ.

‘ಪ್ರತಿಮೆ ನಿರ್ಮಾಣಕ್ಕೆ ಸರ್ಕಾರಿ ಅನುದಾನ ಹೊರತುಪಡಿಸಿ ಉಳಿದ ₹ 240.2 ಕೋಟಿ ಹಣದ ಕ್ರೋಡೀಕರಣಕ್ಕೂ ಮಠದ ಬಳಿ ಸರಿಯಾದ ಯೋಜನೆಗಳಿಲ್ಲ. ಸಂಪನ್ಮೂಲ ಸಂಗ್ರಹಕ್ಕೆ ಮಠ ಪ್ರಯತ್ನಿಸದೇ ಇರುವುದರಿಂದ ಸರ್ಕಾರದ ಅನುದಾನ ಫಲಪ್ರದವಾಗಿಲ್ಲ ಎಂದೇ ಪರಿಗಣಿಸಬಹುದಾಗಿದೆ. ದಶಕದಿಂದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ’ ಎಂಬ ಅಸಮಾಧಾನವನ್ನು ಸಮಿತಿ ವರದಿಯಲ್ಲಿ ವ್ಯಕ್ತಪಡಿಸಿದೆ.

ಚಿತ್ರದುರ್ಗದ ಮುರುಘಾ ಮಠದ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಪ್ರತಿಮೆಯ ಪಾದ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ

ತಾಂತ್ರಿಕ ವರದಿ ಕೇಳಿದ ಜಿಲ್ಲಾಧಿಕಾರಿ

ಬಸವ ಪ್ರತಿಮೆ ನಿರ್ಮಾಣಕ್ಕೆ ಈವರೆಗೆ ನಡೆದ ಕಾಮಗಾರಿಯ ಬಗ್ಗೆ ತಾಂತ್ರಿಕ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಜಿಲ್ಲಾಡಳಿತ ಸೂಚಿಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅನುದಾನ ಬಿಡುಗಡೆ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದೆ. ಕಾಮಗಾರಿ ಪ್ರಗತಿಯ ನಿಖರ ಮಾಹಿತಿಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ಬಳಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ವರದಿ ಕೇಳಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.