ADVERTISEMENT

ನಾಯಕನಹಟ್ಟಿ | ಮುಖ್ಯರಸ್ತೆ ತುಂಬೆಲ್ಲಾ ತಗ್ಗು-ಗುಂಡಿಗಳದ್ದೇ ಕಾರುಬಾರು

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಜ್ಯ ಹೆದ್ದಾರಿಯ ಸ್ಥಿತಿ

ವಿ.ಧನಂಜಯ
Published 23 ಜೂನ್ 2024, 6:02 IST
Last Updated 23 ಜೂನ್ 2024, 6:02 IST
ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ45ರ ಚಳ್ಳಕೆರೆ-ಜಗಳೂರು ರಸ್ತೆ ಮಧ್ಯೆದಲ್ಲಿ ತಗ್ಗುಗುಂಡಿಗಳು ಬಿದ್ದಿರುವುದು
ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ45ರ ಚಳ್ಳಕೆರೆ-ಜಗಳೂರು ರಸ್ತೆ ಮಧ್ಯೆದಲ್ಲಿ ತಗ್ಗುಗುಂಡಿಗಳು ಬಿದ್ದಿರುವುದು   

ನಾಯಕನಹಟ್ಟಿ: ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ-45ರ ತೆಂಬೆಲ್ಲಾ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಟ್ಟಣವು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಪ್ರಸಿದ್ಧಿಯಾಗಿದ್ದು, ಸುತ್ತಮುತ್ತಲ 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಆದರೆ ರಸ್ತೆಗಳು ನಿರ್ವಹಣೆ ಸಮಸ್ಯೆಯನ್ನು ಎದುರಿಸುತ್ತಿವೆ. 

ಜನ ಸಂದಣಿಯಿಂದ ಕೂಡಿರುವ ಮುಖ್ಯರಸ್ತೆ: 

ಪಟ್ಟಣದ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿಯು ಚಳ್ಳಕೆರೆ, ಚಿತ್ರದುರ್ಗ, ಬಳ್ಳಾರಿ, ರಾಯದುರ್ಗ, ಕಲ್ಯಾಣದುರ್ಗ, ದಾವಣಗೆರೆ, ಹೊಸಪೇಟೆ ಮಾರ್ಗವನ್ನು ಸಂರ್ಕಿಸುತ್ತದೆ. ನಿತ್ಯ ಪಟ್ಟಣದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಕಳೆದ ಒಂದು ತಿಂಗಳಿನಿಂದ ಮುಖ್ಯರಸ್ತೆಯಲ್ಲಿ ಒಂದು ಅಡಿ ಆಳದಷ್ಟು ತಗ್ಗು, ಗುಂಡಿಗಳು ನಿರ್ಮಾಣವಾಗಿವೆ. ಹಳೇ ಬಸ್‌ ನಿಲ್ದಾಣದ ಬಳಿ ಇರುವ ಅಕ್ಷಯ ಬಾರ್ ಮುಂಭಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಅಲ್ಲಿರುವ ರಸ್ತೆ ವಿಭಜಕವು ಕಿರಿದಾಗಿದ್ದು, ಸುಗಮವಾಗಿ ಸಂಚರಿಸಲು ಸಾಧ್ಯವಾಗುದಿಲ್ಲ. ಹಾಗೇ ವಾಲ್ಮೀಕಿ ವೃತ್ತದ ಬಳಿ ತಗ್ಗುಗಳು ಸೃಷ್ಟಿಯಾಗಿದ್ದು, ದ್ವಿಚಕ್ರವಾಹನ, ಲಘುವಾಹನ, ಲಾರಿ, ಟ್ರಕ್ಕು, ಟ್ರಾಕ್ಟರ್‌ ಸೇರಿದಂತೆ ಭಾರಿ ವಾಹನ ಹಾಗೂ ಬಸ್‌ಗಳು ಅದರಲ್ಲೇ ಪ್ರಯಾಸದಿಂದ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಅಂಚೆ ಕಚೇರಿಗೆ ತೆರಳುವ ಮಾರ್ಗದಲ್ಲಿ, ಅಂಬೇಡ್ಕರ್ ವೃತ್ತದಿಂದ ನಾಗರಕಟ್ಟೆ ಮಾರ್ಗಕ್ಕೆ ತೆರಳುವ ಮಾರ್ಗದಲ್ಲೂ ರಸ್ತೆ ಗುಂಡಿಮಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ADVERTISEMENT

ವಾಲ್ಮೀಕಿ ವೃತ್ತದಲ್ಲಿ ಯಾವಾಗಲೂ ಜನಸಂದಣಿ ಹೆಚ್ಚಾಗಿರುತ್ತದೆ. ಸಮೀಪದಲ್ಲೇ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಗಳಿವೆ. ವಿದ್ಯಾರ್ಥಿಗಳು ಶಾಲೆಗಳಿಗೆ ಇದೇ ಮಾರ್ಗದಲ್ಲಿ ಬಂದುಹೋಗುತ್ತಾರೆ. ತಗ್ಗುಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ರಸ್ತೆಯ ಪಕ್ಕಕ್ಕೆ ಚಲಿಸುವುದರಿಂದ, ರಸ್ತೆ ಬದಿಯಲ್ಲಿ ಬಸ್‌ಗಳಿಗಾಗಿ ಕಾಯುವ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಜೀವಭಯದಲ್ಲಿ ಇರಬೇಕಾದ ಪರಿಸ್ಥಿತಿ ಇದೆ ಎಂದು ಪಟ್ಟಣವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ತಗ್ಗುಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಚಾಲಕರು ರಸ್ತೆಯ ಪಕ್ಕಕ್ಕೆ ವಾಹನಗಳನ್ನು ತಿರುಗಿಸಿದರೆ, ನಿಯಂತ್ರಣ ತಪ್ಪಿ ಅವು ಡಿಕ್ಕಿ ಹೊಡೆಯುವ ಸಂಭವ ಹೆಚ್ಚು. ಒಂದು ತಿಂಗಳಿನಿಂದ ನಿತ್ಯ ಒಬ್ಬಿಬ್ಬರು ಹೀಗೆ ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಹಲವರು ಬಿದ್ದಿರುವ ನಿದರ್ಶನಗಳೂ ಇವೆ ಎಂದು ತರಕಾರಿ ವ್ಯಾಪಾರಿ ನೀಲಮ್ಮ, ಬಸವರಾಜ ಅವರು ಹೇಳುತ್ತಾರೆ.

ಪ್ರಮುಖ ರಸ್ತೆಯ ಸ್ಥಿತಿ ಹೀಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ತಗ್ಗು ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರಾದ ಮುತ್ತಯ್ಯ, ಕೇಶವಮೂರ್ತಿ, ಪಿ.ಮಂಜುನಾಥ, ಮಹೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಾಲ್ಮೀಕಿ ವೃತ್ತದಲ್ಲಿರುವ ಹೋಟೆಲ್‌ಗಳ ತ್ಯಾಜ್ಯ ನೀರನ್ನು ರಸ್ತೆಗೆ ಸುರಿಯುತ್ತಿರುವುದರಿಂದ ಗುಂಡಿಗಳು ಬಿದ್ದಿವೆ. 2–3 ದಿನದಲ್ಲಿ ಪಟ್ಟಣದಲ್ಲಿರುವ ಎಲ್ಲ ಗುಂಡಿಗಳನ್ನ ಮುಚ್ಚಲು ಅಗತ್ಯ ಕ್ರಮಕೈಗೊಳ್ಳುತ್ತೇವೆ.
ಹಕೀಂ ಅಹಮ್ಮದ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ವಾಹನಗಳ ಓಡಾಟದ ರಭಸಕ್ಕೆ ಗುಂಡಿಗಳಲ್ಲಿರುವ ಜಲ್ಲಿಕಲ್ಲುಗಳು ಜನರ ಮೇಲೆ ಬಂದು ಬೀಳುತ್ತಿವೆ. ತೀವ್ರ ಸ್ವರೂಪದ ಗಾಯವಾಗುವ ಸಂಭವವಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಜೆ.ಆರ್.ರವಿಕುಮಾರ್., ಪ.ಪಂ.ಸದಸ್ಯ
ನಾಯಕನಹಟ್ಟಿ ಪಟ್ಟಣದ ಹೃದಯ ಭಾಗದಲ್ಲಿರುವ ಮುಖ್ಯರಸ್ತೆಯ ಮಧ್ಯೆ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.