ADVERTISEMENT

ನಾಯಕನಹಟ್ಟಿ: ನನಸಾಗದ ಸಂಪರ್ಕ ಸೇತುವೆ ಕಾಮಗಾರಿ!

ಕೆ.ವಿ.ಧನಂಜಯ
Published 21 ಜುಲೈ 2024, 4:40 IST
Last Updated 21 ಜುಲೈ 2024, 4:40 IST
ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಹಲವು ವರ್ಷಗಳಿಂದ ದುರಸ್ಥಿಯಲ್ಲಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ
ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಹಲವು ವರ್ಷಗಳಿಂದ ದುರಸ್ಥಿಯಲ್ಲಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ    

ನಾಯಕನಹಟ್ಟಿ: ಸಮೀಪದ ಓಬಯ್ಯನಹಟ್ಟಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಹಾದುಹೋಗಿರುವ ಹಳ್ಳಕ್ಕೆ ಬಹಳ ಹಿಂದೆ ನಿರ್ಮಿಸಿರುವ ಮೂರು ಅಡಿ ಆಳದ, ಮೂವತ್ತು ಅಡಿ ಉದ್ದದ ಸಂಪರ್ಕ ರಸ್ತೆಯು ಕಡಿದಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ನಾಯಕನಹಟ್ಟಿ, ಎನ್.ಮಹದೇವಪುರ, ರೇಖಲಗೆರೆ, ಓಬಯ್ಯನಹಟ್ಟಿ ಗೊಲ್ಲರಹಟ್ಟಿ ಗ್ರಾಮಗಳಿಂದ ಓಬಯ್ಯನಹಟ್ಟಿ, ಬಲ್ಲನಾಯಕನಹಟ್ಟಿ, ದಾಸರಮುತ್ತೇನಹಳ್ಳಿ, ತಿಮ್ಮಪ್ಪಯ್ಯನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಸಾಧಿಸಲು ಈ ಮಾರ್ಗ ಪ್ರಮುಖವಾಗಿದೆ. ನಿತ್ಯ ಈ ದಾರಿಯಲ್ಲಿ ಎತ್ತಿನಗಾಡಿ, ಬೈಕ್‌ಗಳು, ಆಟೋಗಳು, ಟ್ರ್ಯಾಕ್ಟರ್‌ಗಳು ಸಂಚರಿಸುತ್ತವೆ. ದಾರಿಯಲ್ಲಿ ಸುಗಮವಾಗಿ ಸಾಗುವಾಗ ತಕ್ಷಣಕ್ಕೆ ಎದುರಾಗುವ ಈ ಸೇತುವೆಯು ಮೂರು ಅಡಿಗಳಷ್ಟು ಕೆಳಗೆ ಇಳಿದು 30 ಮೀಟರ್ ಉದ್ದ ಸ್ವಲ್ಪದೂರ ಚಲಿಸಿ ನಂತರ ಮೂರು ಅಡಿಗಳಷ್ಟು ಮೇಲಕ್ಕೆ ಚಲಿಸಿ ಸರಿದಾರಿಗೆ ಬರಬೇಕಿದೆ.

ಹೀಗೆ ಸಾಗುವಾಗ ವಾಹನ ಸವಾರರು ತಮ್ಮ ಜೀವವನ್ನು ಕೈಲಿ ಹಿಡಿದು ಸಾಗಬೇಕಿದೆ. ಅಷ್ಟು ದೊಡ್ಡಮಟ್ಟದಲ್ಲಿ ಈ ಸಂಪರ್ಕ ಸೇತುವೆ ಅಪಾಯದ ಸ್ಥಿತಿ ತಲುಪಿದೆ. ಜತೆಗೆ ಈ ಮಾರ್ಗದ ಎರಡೂ ಭಾಗದಲ್ಲಿ ಕಂದಕಗಳಿದ್ದು, ಅಲ್ಲಿ ಬೃಹತ್‌ ಪ್ರಮಾಣದಲ್ಲಿ ಸೀಮೆ ಜಾಲಿ ಗಿಡಗಳು ಬೆಳದಿವೆ. ವಾಹನ ಸವಾರರು ಸ್ವಲ್ಪ ಆಯತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ.

ADVERTISEMENT

ಓಬಯ್ಯನಹಟ್ಟಿ, ದಾಸರ ಮುತ್ತೇನಹಳ್ಳಿ ಸೇರಿ ಹತ್ತಾರು ಗ್ರಾಮಗಳಿಂದ ಶಾಲೆ, ಕಾಲೇಜು, ಆಸ್ಪತ್ರೆ, ವ್ಯಾಪಾರ ವಹಿವಾಟಿಗೆಂದು ನಾಯಕನಹಟ್ಟಿ, ಚಳ್ಳಕೆರೆ, ಚಿತ್ರದುರ್ಗಕ್ಕೆ ನಿತ್ಯ ನೂರಾರು ಜನರು ಸಂಚರಿಸುತ್ತಾರೆ. ಅಷ್ಟೆ ಅಲ್ಲದೆ 50ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಟಂಟಂ ಆಟೊಗಳಲ್ಲಿ ಇದೇ ಮಾರ್ಗವನ್ನು ದಾಟಿ ಹೋಗಬೇಕಿದೆ.

‘ಈ ರಸ್ತೆ ಅಪಾಯದ ಸ್ಥಿತಿಯಲ್ಲಿರುವುರಿಂದ ಯಾವುದೇ ಬಸ್‌ಗಳು ಈ ಗ್ರಾಮಕ್ಕೆ ಬರುವುದಿಲ್ಲ. ಬಹುತೇಕ ಗ್ರಾಮಸ್ಥರು, ಸೀಟ್ ಆಟೊ, ಬೈಕ್‌ಗಳಲ್ಲಿ ಸಂಚರಿಸುತ್ತಾರೆ. ಈ ಮಾರ್ಗದ ಬಳಿ ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಘಾತ ಖಚಿತ. ಇಲ್ಲಿಯವರೆಗೂ ಈ ಸೇತುವೆ ಮೇಲೆ ಹಲವು ಅಪಘಾತಗಳು ಸಂಭವಿಸಿ ಸಾರ್ವಜನಿಕರು ಸಾಕಷ್ಟು ನೀವು ಅನುಭವಿಸಿದ್ದಾರೆ’ ಎಂದು ಗ್ರಾಮಸ್ಥರಾದ ಗಿರೀಶ್, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ಹೇಳುತ್ತಾರೆ.

ಓಬಯ್ಯನಹಟ್ಟಿ ಗ್ರಾಮದ ಕೆರೆಗೆ ಇದೇ ಮಾರ್ಗದ ಮೇಲೆ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತದೆ. ಅದರಲ್ಲೂ ಉತ್ತಮವಾಗಿ ಮಳೆಯಾದರೆ ಬೃಹತ್‌ ಪ್ರಮಾಣದ ಮಳೆನೀರು ಹಳ್ಳದ ಮೂಲಕ ಹರಿದು ಬಂದು ಇದೇ ಮಾರ್ಗದ ಮೇಲೆ ಹರಿಯುತ್ತವೆ. ಈ ರಸ್ತೆ ಮೇಲೆ ಮಳೆನೀರು ಹರಿಯುವಾಗ ಹಲವು ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಆ ಗ್ರಾಮಗಳಿಗೆ ತೆರಳಲು ಬೇರೆ ಬೇರೆ ಮಾರ್ಗಗಳಲ್ಲಿ ಹತ್ತಾರು ಕಿ.ಮೀ ದೂರ ಹೆಚ್ಚುವರಿಯಾಗಿ ಸಂಚರಿಸಿ ಗ್ರಾಮಗಳನ್ನು ತಲುಪಬೇಕಾಗುತ್ತದೆ.

ಹಾಗೇ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಈ ಮಾರ್ಗ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಆದರೂ 15 ವರ್ಷಗಳಿಂದ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚತುಕೊಂಡು ಸುಸಜ್ಜಿತವಾದ ಸೇತುವೆ ನಿರ್ಮಿಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಓಬಯ್ಯನಹಟ್ಟಿ ಗ್ರಾಮಸ್ಥರಾದ ಡಿ.ಟಿ.ಕಾಮರಾಜ್, ನಾಗಭೂಷಣ, ಗಟ್ಟಿಬೋರಯ್ಯ, ಗುಡ್ಡದ ಮಲ್ಲಯ್ಯ, ಮ್ಯಾಕಲ ಮಲ್ಲಯ್ಯ ಮತ್ತೊಮ್ಮೆ ಆಗ್ರಹಿಸಿದ್ದಾರೆ.

ಸೇತುವೆ ಕೆಳಭಾಗದಲ್ಲಿ ಹೂಳುತುಂಬಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.