ನಾಯಕನಹಟ್ಟಿ: ರಾಜ್ಯ ಹೆದ್ದಾರಿ-45ರಲ್ಲಿ ವಾಹನ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆಂದು ಲೋಕೋಪಯೋಗಿ ಇಲಾಖೆ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ರಸ್ತೆ ಕೇವಲ ಮೂರೇ ತಿಂಗಳಲ್ಲಿ ಕಿತ್ತು ಹೋಗಿದೆ.
ನಾಯಕನಹಟ್ಟಿ ಎಂದಾಕ್ಷಣ ತಕ್ಷಣವೇ ನೆನಪಾಗುವುದೇ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ. ದೇಗುಲದ ಅನತಿ ದೂರದಲ್ಲಿ ಚಳ್ಳಕೆರೆ-ಅರಭಾವಿ ರಾಜ್ಯ ಹೆದ್ದಾರಿ-45 ಹಾದುಹೋಗಿದೆ. ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಕೋಡಿನೀರು ಹರಿಯುವ ಚಿಕ್ಕಹಳ್ಳ ರಸ್ತೆ ಹಾದುಹೋಗುತ್ತದೆ. ಈ ಚಿಕ್ಕಹಳ್ಳವು ತಗ್ಗುಪ್ರದೇಶದಿಂದ ಕೂಡಿದ್ದು, 2019-20ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ₹ 1.50 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸೇತುವೆ ನಿರ್ಮಿಸಲು ಮುಂದಾಯಿತು.
ನಂತರ ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆಯ ತಾಂತ್ರಿಕ ದೋಷಗಳು ಮತ್ತು ಗುತ್ತಿಗೆದಾರರ ವಿಳಂಬ ನೀತಿಯಿಂದ 2024ರ ಮಾರ್ಚ್ ತಿಂಗಳಲ್ಲಿ ಸೇತುವೆ ನಿರ್ಮಾಣವಾಯಿತು. ಈ ಸೇತುವೆ ರಸ್ತೆ ಮಟ್ಟದಿಂದ ನಾಲ್ಕು ಅಡಿಗಳಷ್ಟು ಎತ್ತರವಾಗಿದ್ದು, ಸೇತುವೆ ಕೆಳಗೆ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ನಿರ್ಮಿಸಲಾಯಿತು.
ಆದರೆ ಆ ಸೇತುವೆ ಎರಡೂ ಬದಿಯಲ್ಲಿ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಕೆಳಗಿದ್ದು, ಅದನ್ನು ನಾಲ್ಕು ಅಡಿಗಳಷ್ಟು ಎತ್ತರಿಸಿಕೊಂಡು ನಿರ್ಮಿಸಬೇಕಿತ್ತು. ಆದರೆ ಆ ಕೆಲಸ ಸರಿಯಾಗಿ ಆಗಲಿಲ್ಲ. ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ₹ 50ಲಕ್ಷ ಅನುದಾನವನ್ನು ಪ್ರತ್ಯೇಕವಾಗಿ ಒದಗಿಸಿತು. ಈ ಅನುದಾನದಲ್ಲಿ ಚಳ್ಳಕೆರೆ ಕಡೆಯಿಂದ ಪಟ್ಟಣಕ್ಕೆ ಬರುವ ದಾರಿಯಲ್ಲಿ ಎಚ್‌ಪಿ ಪೆಟ್ರೋಲ್ ಬಂಕ್‌ನಿಂದ ಸೇತುವೆಯ ಒಂದು ತುದಿಯವರೆಗೆ 100ಮೀಟರ್ ಮತ್ತು ಸೇತುವೆಯ ಇನ್ನೊಂದು ಬದಿಯಿಂದ ಗುರುತಿಪ್ಪೇರುದ್ರಸ್ವಾಮಿ ದೇಗುಲದ ಮುಂಭಾಗದವರೆಗೂ 100 ಮೀಟರ್ ಸೇರಿ ಸೇರಿ 200ಮೀಟರ್ ರಸ್ತೆಯನ್ನು ನಿರ್ಮಿಸಲಾಯಿತು.
6ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸೇತುವೆ ನಿರ್ಮಾಣ ಕಾಮಗಾರಿಯು 2024ರ ಮಾರ್ಚ್ ವೇಳೆಗೆ ಮುಕ್ತಾಯದ ಹಂತ ತಲುಪಿತು. ಹಾಗೆಯೇ ಮಾರ್ಚ್ 26ರಂದು ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆ ನಿಗದಿಯಾಗಿತ್ತು. ಜಾತ್ರೆಗೆ ಸಾವಿರಾರು ವಾಹನಗಳು, ಲಕ್ಷಾಂತರ ಭಕ್ತರು ಬರುವ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಯಿತು.
ಅದರಂತೆ ಸೇತುವೆಗೆ ಹೊಂದಿಕೊಂಡಂತೆ ಅದರ ಎತ್ತರಕ್ಕೆ ಎರಡೂ ಬದಿಯಲ್ಲಿ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಯಿತು. ಮಾರ್ಚ್ 24ರಂದು ತರಾತುರಿಯಾಗಿ 200ಮೀಟರ್ ರಸ್ತೆಯನ್ನು ನಿರ್ಮಿಸಿ ಜಾತ್ರೆಯ ಜನರ ಸುಗಮ ಸಂಚಾರಕ್ಕೆ ಸೇತುವೆ ಮತ್ತು ರಸ್ತೆಯನ್ನು ಒದಗಿಸಿದರು. ಜಾತ್ರೆ ಮುಗಿದು ಒಂದು ತಿಂಗಳ ನಂತರ ಸೇತುವೆಗೆ ತಡೆಗೋಡೆ ಪಿಲ್ಲರ್‌ಗಳನ್ನು ನಿರ್ಮಿಸಲಾಯಿತು.
ಆದರೆ ₹ 50ಲಕ್ಷ ವೆಚ್ಚದಲ್ಲಿ ತರಾತುರಿಯಾಗಿ ನಿರ್ಮಿಸಿದ ರಸ್ತೆಯು ದಿನ ಕಳೆದಂತೆ ತನ್ನ ಗುಣಮಟ್ಟವನ್ನು ಕಳೆದುಕೊಂಡು ನಿರ್ಮಾಣವಾದ ಕೇವಲ ಮೂರೇ ತಿಂಗಳಿಗೆ ಕಿತ್ತುಹೋಗುತ್ತಾ ಬರುತ್ತಿದೆ. ‘ಇದೊಂದು ಕಳಪೆ ಕಾಮಗಾರಿ ಎಂದು ರಸ್ತೆಯೇ ಸಾಕ್ಷಿ ನುಡಿಯುತ್ತಿದೆ. ರಸ್ತೆಯನ್ನು ನೋಡಿದರೆ ಕಳಪೆ ಎಂದು ಯಾರು ಬೇಕಾದರೂ ಗುರುತಿಸಬಹುದು’ ಎಂದು ಗ್ರಾಮಸ್ಥರಾದ ಬಿ.ಟಿ.ಪ್ರಕಾಶ್, ರುದ್ರಮುನಿ, ರಮೇಶ್ ಹೇಳುತ್ತಾರೆ.
ಶಾಸಕ ಎನ್.ವೈ.ಗೋಪಾಲಕೃಷ್ಣ ಭೂಮಿಪೂಜೆ ನೆರವೇರಿಸಿದ್ದರು. ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರೂ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ ಪರಿಣಾಮ ಕೇವಲ 90 ದಿನಗಳಲ್ಲೇ ರಸ್ತೆ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ರಸ್ತೆಯ ಕೆಳಗೆ ಪಟ್ಟಣಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್‌ಲೈನ್ ಹಾದುಹೋಗಿದೆ. ಇದರಿಂದ ರಸ್ತೆ ಹಾಳಾಗಿದ್ದು ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುವುದುವಿಜಯಬಾಸ್ಕರ್. ಪಿಡಬ್ಲ್ಯುಡಿ ಎಇಇ ಚಳ್ಳಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.