ADVERTISEMENT

ಕೆಳಸೇತುವೆ: ಕಾಟೀಹಳ್ಳಿ ಜನರ ತಪ್ಪದ ಪರದಾಟ

ಅವೈಜ್ಞಾನಿಕ ರೈಲ್ವೆ ಕೆಳಸೇತುವೆ ನಿರ್ಮಿಸಿದವರಿಗೆ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು

ಕೆ.ಎಸ್.ಪ್ರಣವಕುಮಾರ್
Published 3 ಡಿಸೆಂಬರ್ 2021, 6:10 IST
Last Updated 3 ಡಿಸೆಂಬರ್ 2021, 6:10 IST
ಚಿತ್ರದುರ್ಗ ತಾಲ್ಲೂಕಿನ ಕಾಟೀಹಳ್ಳಿ ಗ್ರಾಮ ಪ್ರವೇಶಕ್ಕೂ ಮುನ್ನ ನಿರ್ಮಿಸಿರುವ ರೈಲ್ವೆ ಕೆಳಸೇತುವೆ ಮಾರ್ಗ ಕಿರಿದಾಗಿರುವುದು
ಚಿತ್ರದುರ್ಗ ತಾಲ್ಲೂಕಿನ ಕಾಟೀಹಳ್ಳಿ ಗ್ರಾಮ ಪ್ರವೇಶಕ್ಕೂ ಮುನ್ನ ನಿರ್ಮಿಸಿರುವ ರೈಲ್ವೆ ಕೆಳಸೇತುವೆ ಮಾರ್ಗ ಕಿರಿದಾಗಿರುವುದು   

ಚಿತ್ರದುರ್ಗ: ಸುಗಮ ಸಂಚಾರಕ್ಕಾಗಿ ನಿರ್ಮಿಸಿದ ರೈಲ್ವೆ ಕೆಳಸೇತುವೆ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಭಾರಿ ವಾಹನಗಳು ಸಂಚರಿಸಲು ಸಾಧ್ಯವಾಗದಷ್ಟು ಕಿರಿದಾಗಿದೆ. ಇದರಿಂದಾಗಿ ಜನ ಪರದಾಡುವ ದುಃಸ್ಥಿತಿ ನಿರ್ಮಾಣವಾಗಿದೆ. ಕೆಳಸೇತುವೆ ಮಾರ್ಗದ ಎರಡೂ ಬದಿಯಲ್ಲಿ ತಿರುವು ಪಡೆಯಬೇಕಿರುವ ಕಾರಣ ಒಂದೆಡೆ ಇಳಿಜಾರಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ತಾಲ್ಲೂಕಿನ ಮಾನಂಗಿ–ಸಿದ್ಧಾಪುರ ಮಾರ್ಗದ ಮಧ್ಯೆ ಸಿಗುವ ಕಾಟೀಹಳ್ಳಿಯಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಿ ಮೂರು ವರ್ಷವಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ನಿತ್ಯ ಒಂದಿಲ್ಲೊಂದು ತೊಂದರೆಗೆ ಸಿಲುಕುತ್ತಿದ್ದಾರೆ. ನಿರ್ಮಿಸಿದವರಿಗೆ ಈಗಲೂ ಗ್ರಾಮಸ್ಥರು ಹಿಡಿಶಾಪ ಹಾಕುತ್ತಲೇ ಇದ್ದಾರೆ.

ರೈಲ್ವೆ ಕೆಳಸೇತುವೆ ನಿರ್ಮಿಸಿದ ಬಳಿಕ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರವೇ ಸ್ಥಗಿತಗೊಂಡಿದೆ. ಕಿರಿದಾದ ಕೆಳಸೇತುವೆ ಪ್ರವೇಶಿಸಲು ಸಾಧ್ಯವಾಗದೇ ಇರುವುದೇ ಇದಕ್ಕೆ ಪ್ರಮುಖ ಕಾರಣ. ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿ ಬಸ್‌ ನಿಲ್ಲುತ್ತದೆ. ಬಸ್‌ನಲ್ಲಿ ಪ್ರಯಾಣಿಸುವ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿ ಗ್ರಾಮಸ್ಥರು ಅಲ್ಲಿಯವರೆಗೂ ನಡೆದುಕೊಂಡು ಹೋಗಿ ಬಸ್ ಹತ್ತಬೇಕಿದೆ. ಗ್ರಾಮದಲ್ಲಿ ಮದುವೆಯಂತಹ ಶುಭ ಕಾರ್ಯಕ್ರಮ ನಡೆದಾಗಲೂ ಬಸ್‌ ಅನ್ನು ದೂರದಲ್ಲಿ ನಿಲ್ಲಿಸಿ ನಡೆದುಕೊಂಡೇ ಜನ ಬರುತ್ತಿದ್ದಾರೆ.

ADVERTISEMENT

ಬೆಳೆ ಸಾಗಿಸಲು ಹರಸಾಹಸ: ಗ್ರಾಮದಲ್ಲಿ ಮೆಕ್ಕೆಜೋಳ, ರಾಗಿ, ಅಡಿಕೆ ಪ್ರಮುಖ ಬೆಳೆಯಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಚಿತ್ರದುರ್ಗದ ಮಾರುಕಟ್ಟೆಗೆ ತರಬೇಕು. ಆದರೆ, ಟ್ರ್ಯಾಕ್ಟರ್‌ಗೆ ಬೆಳೆಗಳನ್ನು ಲೋಡ್ ಮಾಡಿದರೂ ಕೆಳಸೇತುವೆಯಿಂದ ಸಂಚರಿಸಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಕೆಳಸೇತುವೆಯ ಎರಡು ಬದಿಯಲ್ಲೂ ವಾಹನಗಳನ್ನು ನಿಲ್ಲಿಸಿ, ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬೆಳೆಗಳನ್ನು
ಲೋಡ್ ಮಾಡಲು ರೈತರು ಹರಸಾಹಸ ಪಡುತ್ತಿದ್ದಾರೆ.

ಕೊಳವೆಬಾವಿ ಕೊರೆಯಿಸುವುದು ಕಷ್ಟ: ಗ್ರಾಮದೊಳಗೆ ಪ್ರವೇಶಿಸಬೇಕಾದರೆ ಕೆಳಸೇತುವೆ ದಾಟಿಯೇ ವಾಹನಗಳು ಬರಬೇಕು. ರೈತರ ಜಮೀನಿನಲ್ಲಿ ಈಗಿರುವ ಕೊಳವೆಬಾವಿ ಕೈಕೊಟ್ಟು ಹೊಸದಾಗಿ ಕೊರೆಯಿಸಲು ಲಾರಿಗಳು ಬರಲು ಇಲ್ಲಿ ಸಾಧ್ಯವೇ ಇಲ್ಲ. ವ್ಯವಹಾರ ಚಟುವಟಿಕೆ ಕೈಬಿಡಬಾರದು ಎಂಬ ಅನಿವಾರ್ಯ ಕಾರಣಕ್ಕಾಗಿ ಎಂಟು–ಹತ್ತು ಕಿ.ಮೀ. ಸುತ್ತುವರುದು ಬೇರೆ ಮಾರ್ಗದಿಂದ ಗ್ರಾಮಕ್ಕೆ ಕೊಳವೆಬಾವಿ ಕೊರೆಯುವ ವಾಹನಗಳು ಪ್ರವೇಶಿಸುತ್ತಿವೆ. ಇದು ಕೂಡ ರೈತರನ್ನು ಹೈರಾಣಾಗುವಂತೆ ಮಾಡಿದೆ.

‘ಗ್ರಾಮದ ಸಮೀಪ ಕೆಳಸೇತುವೆ ನಿರ್ಮಾಣಕ್ಕೂ ಮುನ್ನ ರೈಲುಗಳು ಸಂಚರಿಸುವಾಗ ಕನಿಷ್ಠ 20 ನಿಮಿಷವಾದರೂ ಈ ಮುಂಚೆ ಮಾರ್ಗದಲ್ಲಿ ಕಾಯಬೇಕಿತ್ತು. ಎರಡು ಕಡೆ ಅಧಿಕ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಸ್ವಲ್ಪ ಟ್ರಾಫಿಕ್‌ ಕಿರಿಕಿರಿ ಬಿಟ್ಟರೆ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ಯಾವ ಸಮಸ್ಯೆ ಇರಲಿಲ್ಲ. ಇದು ನಿರ್ಮಾಣವಾದ ಮೇಲೆ ಸಾಲು–ಸಾಲು ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಇಲ್ಲಿನ ಜನ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಲ್ಲಾ ಬಗೆಯ ವಾಹನಗಳು ಸುಗಮವಾಗಿ ಸಂಚರಿಸುವಂತೆ ನಿರ್ಮಿಸಿಕೊಡುತ್ತೇನೆ ಎಂದ ಗುತ್ತಿಗೆದಾರ ಸಾಮಗ್ರಿಗಳ ಸಮೇತ ನಾಪತ್ತೆಯಾಗಿದ್ದಾನೆ. ಆತನ ಹುಡುಕಾಟದಲ್ಲೇ ಇರುವ ಗ್ರಾಮಸ್ಥರು ಕೈಗೆ ಸಿಕ್ಕರೆ ಸುಮ್ಮನೆ ಬಿಡುವುದಿಲ್ಲ. ವೈಜ್ಞಾನಿಕವಾಗಿ ನಿರ್ಮಿಸುವವರೆಗೂ ಊರಿಂದ ಆಚೆ ಹೋಗಲು ಬಿಡುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ಗ್ರಾಮದ
ಮುಖಂಡರು ತಿಳಿಸಿದ್ದಾರೆ.

ಕೋಟ್‌...

ಕೆಳಸೇತುವೆ ಅವೈಜ್ಞಾನಿಕವಾಗಿದೆ. ಜನರಿಗೆ ಅನುಕೂಲದ ಬದಲು ಅನನುಕೂಲಗಳೇ ಹೆಚ್ಚಾಗಿದೆ. ಇದರ ವಿಸ್ತೀರ್ಣ ಹೆಚ್ಚಿಸುವ ಮೂಲಕ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಿ.
ವೀರೇಶ್, ಕಾಟೀಹಳ್ಳಿ ಗ್ರಾಮಸ್ಥ

ವೈಜ್ಞಾನಿಕವಾಗಿ ನಿರ್ಮಿಸಲು ಸಾಧ್ಯವಾಗದೇ ಇದ್ದರೆ, ಕೆಳಸೇತುವೆ ಸಂಪೂರ್ಣ ಮುಚ್ಚಿ. ಮೊದಲು ಹೇಗಿತ್ತೊ ಹಾಗೆಯೇ ಮಾಡಿಕೊಡಿ. ಅಧಿಕಾರಿಗಳು ಗಮನಹರಿಸಿ ಇಲ್ಲಿ ನಿತ್ಯ ಉಂಟಾಗುತ್ತಿರುವ ತೊಂದರೆ ತಪ್ಪಿಸಿ.
ವಿ. ಲಿಂಗರಾಜು, ಕಾಟೀಹಳ್ಳಿ ಗ್ರಾಮಸ್ಥ

ಅಗ್ನಿಶಾಮಕ ವಾಹನವೂ ಬರೋಲ್ಲ

ಗ್ರಾಮದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನವೂ ಬರೋಲ್ಲ ಸ್ವಾಮಿ. ಅದು ಕೂಡ ಎಂಟು–ಹತ್ತು ಕಿ.ಮೀ. ಸುತ್ತುವರಿದುಕೊಂಡೇ ಗ್ರಾಮ ಪ್ರವೇಶಿಸಬೇಕು. ಅಷ್ಟರೊಳಗೆ ಅನಾಹುತ ಕಟ್ಟಿಟ್ಟ ಬುತ್ತಿ. ಬುದ್ಧಿ ಇಲ್ಲದವರ ಕೈಗೆ ಗುತ್ತಿಗೆ ಕೊಟ್ಟರೆ ಈ ರೀತಿಯ ಅವೈಜ್ಞಾನಿಕ ಕೆಳಸೇತುವೆ ಬಿಟ್ಟರೆ ಮತ್ತಿನ್ನೇನು ನಿರ್ಮಿಸಲು ಸಾಧ್ಯ ಎಂಬುದು ಗ್ರಾಮಸ್ಥರ ಪ್ರಶ್ನೆ.

ಅತಿಯಾದ ಮಳೆಯಾದರೆ ನೀರು ಸರಾಗವಾಗಿ ಹೋಗುವುದಿಲ್ಲ. ದ್ವಿಚಕ್ರ ವಾಹನ, ಕಾರು, ಆಟೊ ಇತರ ಲಘು ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ಮೊಣಕಾಲು ಮಟ್ಟದವರೆಗೂ ನೀರು ನಿಲ್ಲುವುದರಿಂದ ಈಗಾಗಲೇ ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.