ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ‘ವಿನಯ’ವನ್ನು ಖರೀದಿಸಿ ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ರಾಷ್ಟ್ರನಾಯಕ ನಿಜಲಿಂಗಪ್ಪ ಅವರ ಮನೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 2021-22ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ₹ 5 ಕೋಟಿ ಅನುದಾನ ಮೀಸಲಿಟ್ಟಿತ್ತು.ನಿಜಲಿಂಗಪ್ಪ ಅವರ ಕುಟುಂಬದ ಸದಸ್ಯರಿಂದ ಮನೆ ಖರೀದಿಸಿ ಸಂರಕ್ಷಣೆ ಮಾಡಬೇಕಿತ್ತು. ಇದಕ್ಕೆ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು.
ಸರ್ಕಾರ ಅನುದಾನ ಮೀಸಲಿಟ್ಟು ಹೊರಡಿಸಿದ ಆದೇಶದ ಪ್ರಕಾರ ಮನೆ ಖರೀದಿಸಲು ಅವಕಾಶ ಇರಲಿಲ್ಲ. ಆದೇಶವನ್ನು ಮರು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಕಚೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿತ್ತು. ಮನೆಯ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಿ ಕೋರಿಕೆ ಸಲ್ಲಿಸಲಾಗಿತ್ತು. ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿಅವರೂ ಅನುದಾನ ಬಿಡುಗಡೆಗೆ ಸರ್ಕಾರವನ್ನುಕೋರಿಕೊಂಡಿದ್ದರು.
ಇದನ್ನು ಪರಿಶೀಲಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮನೆ ಸಂರಕ್ಷಣೆಗೆ ಅಗತ್ಯ ಇರುವ ಕ್ರಮ ಕೈಗೊಂಡಿದೆ.
‘ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಖರೀದಿಸಿ ಸಂರಕ್ಷಿಸಿ ಹಾಗೂ ಅಭಿವೃದ್ಧಿಗೊಳಿಸಲು’ ಎಂದು ತಿದ್ದುಪಡಿ ಆದೇಶ ಹೊರಡಿಸಿದೆ. ಇದರಂತೆ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿ ಬಳಕೆಗೆ ಅನುಮತಿ ನೀಡಿದೆ. ₹ 4.18 ಕೋಟಿಗೆ ಮನೆ ಖರೀದಿಸಲು ಹಾಗೂ ₹ 81.5 ಲಕ್ಷದಲ್ಲಿ ಮನೆ ಅಭಿವೃದ್ಧಿ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.