ಸಿರಿಗೆರೆ: ಸರ್ಕಾರದ ಉದ್ದೇಶಿತ ಕೈಗಾರಿಕಾ ಕಾರಿಡಾರ್‌ಗಳಿಗೆ ತಲೆಮಾರುಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಬೇಡ ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
ಭಾರಿ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಶ್ರೀಗಳು ಈ ಸಲಹೆ ನೀಡಿದರು.
ನಾವು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಯ ಪರವಾಗಿಯೇ ಇದ್ದೇವೆ. ಆದರೆ ಅಂತಹ ಕಾರಿಡಾರ್‌ಗಳು ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯಲ್ಲಿ ತಲೆ ಎತ್ತಲಿ.ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ
ಆರೇಳು ತಲೆಮಾರುಗಳಿಂದ ನಿರಂತರ ಕೃಷಿ ಮಾಡಿಕೊಂಡಿರುವ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ರೈತರ ಬದುಕನ್ನೇ ಕಸಿದುಕೊಂಡಂತಾಗುತ್ತದೆ. ಬದಲಿಗೆ ಉಳುಮೆಗೆ ಯೋಗ್ಯವಲ್ಲದ ಭೂಮಿಯನ್ನು ಗುರುತಿಸಿ ಅಂತಹ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸುವುದು ಸೂಕ್ತ ಎಂದು ಶ್ರೀಗಳು ಹೇಳಿದರು.
ಸಚಿವನಾಗಿ ವೈಯುಕ್ತಿಕವಾಗಿ ನನಗೆ ರೈತರ ಹಿತವೇ ಮುಖ್ಯ. ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲಎಂ.ಬಿ. ಪಾಟೀಲ್, ಭಾರಿ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ
‘ದಾವಣಗೆರೆ ಸಮೀಪ ಕೈಗಾರಿಕಾ ಕಾರಿಡಾರ್ ಉದ್ದೇಶಕ್ಕಾಗಿ ಫಲವತ್ತಾದ 1,156 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ. ರೈತರು ಈ ಭೂಮಿಯಲ್ಲಿ ಅಡಿಕೆ, ತೆಂಗು, ಮಾವು, ಸಂಬಾರು ಪದಾರ್ಥಗಳೂ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ವಾಧೀನ ವಿರೋಧಿಸಿ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಮುಂತಾದ ಗ್ರಾಮಗಳ ರೈತರು ಮಠದ ನ್ಯಾಯಪೀಠದಲ್ಲಿ ಮನವಿ ಸಲ್ಲಿಸಿದ್ದಾರೆ’ ಎಂದು ಶ್ರೀಗಳು ಸಚಿವರಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.