ಹಿರಿಯೂರು: ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಸರ್ಕಾರಿ ನೌಕರಿಯಲ್ಲಿರುವವರು, ಆದಾಯ ತೆರಿಗೆ ಪಾವತಿಸುವವರು ಪಡೆದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುತ್ತದೆಯೇ ವಿನಾ ಬಡತನ ರೇಖೆಗಿಂತ ಕೆಳಗಿರುವವರ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಆದಿವಾಲ ಫಾರಂನಲ್ಲಿ ನ್ಯಾಯಬೆಲೆ ಅಂಗಡಿಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಪೂರೈಸುವ ಪಡಿತರ ಧಾನ್ಯ ಉಳ್ಳವರ ಪಾಲಾಗಬಾರದು ಎಂಬ ಕಾರಣಕ್ಕೆ ಸರ್ಕಾರವು ಅನರ್ಹರ ಪಡಿತರ ಕಾರ್ಡ್‌ಗಳ ರದ್ಧತಿಗೆ ಮುಂದಾಗಿದೆ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿಯವರು ಸುಳ್ಳು ವದಂತಿಗಳನ್ನು ಹಬ್ಬಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಯಶಸ್ಸು ಸಿಗುವುದಿಲ್ಲ. ಕಾಂಗ್ರೆಸ್ ಬಡವರಪರ ಎಂಬುದಕ್ಕೆ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪು ಸಾಕ್ಷಿಯಾಗಿದೆ. ನ್ಯಾಯಬೆಲೆ ಅಂಗಡಿಗಳವರು ಪಡಿತರವನ್ನು ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂದಿಹಳ್ಳಿ ಶ್ರೀಧರ್, ಕಾರ್ಯದರ್ಶಿ ದೇವಾನಂದ್ ಬಾಬು, ಮುಖಂಡರಾದ ಆನಂದಪ್ಪ, ಎಂ.ಜಿ.ಸುಂದರಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ರಘು, ಮಣಿಯಪ್ಪ, ಪಟ್ರೆಹಳ್ಳಿ ಶ್ರೀಧರ್, ಮಹಾಲಿಂಗಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.