ಮೊಳಕಾಲ್ಮುರು: ತಾಲ್ಲೂಕಿನ ಜೀವನಾಡಿ ಎಂದು ಹೆಸರಾಗಿರುವ ರಂಗಯ್ಯನದುರ್ಗ ಜಲಾಶಯ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಕಾವಲುಗಾರರು ಸೇರಿದಂತೆ ಸಿಬ್ಬಂದಿಯೂ ಇಲ್ಲದ ಪರಿಣಾಮ ಜಲಾಶಯಕ್ಕೆ ಭದ್ರತೆ ಮರೀಚಿಕೆಯಾಗಿದೆ.
ಜಲಾಶಯ ನಿರ್ಮಾಣವಾಗಿ 5 ದಶಕವಾಗುತ್ತಾ ಬಂದರೂ, ಇಲ್ಲಿಯವರೆಗೆ ವಿದ್ಯುತ್ ಸಂಪರ್ಕವಿಲ್ಲದ್ದರಿಂದ ಜನರೇಟರ್ ಅವಲಂಬನೆಯೇ ಅನಿವಾರ್ಯವಾಗಿದೆ. ಹಗಲು ಮತ್ತು ರಾತ್ರಿ ಕಾವಲುಗಾರರು, ಗೇಟ್ ನಿರ್ವಹಣೆ ಮಾಡುವವರು, ನೀರುಗಂಟಿಗಳೂ ಇಲ್ಲ. ಮೊದಲು ಇದ್ದ 11 ಜನ ಸಿಬ್ಬಂದಿಯ ಪೈಕಿ 8 ಮಂದಿಯನ್ನು ಜಿಲ್ಲಾಡಳಿತ ಬೇರೆ ಇಲಾಖೆಗೆ ವರ್ಗಾವಣೆ ಮಾಡಿದೆ. ಈಗ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡುತ್ತಿಲ್ಲ, ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲೂ ಸಾಧ್ಯವಾಗಿಲ್ಲ.
‘ಬರಪೀಡಿತ ಪ್ರದೇಶ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿನಲ್ಲಿ ಜಲಾಶಯವಿದೆ ಎಂಬುದೇ ಹಲವರಿಗೆ ತಿಳಿದಿಲ್ಲ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇಲ್ಲಿಯ ಶಾಸಕರಾಗಿದ್ದ ಪಾಪನಾಯಕ ಈ ಜಲಾಶಯ ಮಂಜೂರಾತಿಗೆ ಶ್ರಮಿಸಿದ್ದರು. 1973ರಲ್ಲಿ ಆರಂಭವಾದ ಕಾಮಗಾರಿ 1978ರಲ್ಲಿ ಪೂರ್ಣವಾಗಿತ್ತು.
5 ದಶಕ ಕಳೆದರೂ ಜಲಾಶಯಕ್ಕೆ ಬೇಕಿರುವ ಮೂಲ ಸೌಕರ್ಯಗಳು ಪೂರೈಸದಿರುವುದು ವಿಪರ್ಯಾಸ. ಕೆಲವು ಸಂದರ್ಭಗಳಲ್ಲಿ ಅಪರಿಚಿತರು ರಾತ್ರಿ ವೇಳೆ ಜಲಾಶಯದ ಗೇಟ್ ಎತ್ತಿ ನೀರನ್ನು ಹೊರ ಬಿಟ್ಟುಕೊಂಡಿರುವ ಘಟನೆಗಳೂ ನಡೆದಿವೆ. ಆದರೂ ಜಲಾಶಯದ ಭದ್ಯರ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ಜಗಳೂರು, ಕೂಡ್ಲಿಗಿ ಭಾಗದ ಮಳೆ ನೀರನ್ನು ಆಶ್ರಯಿಸಿ ಈ ಜಲಾಶಯ ನಿರ್ಮಾಣವಾಗಿದೆ. ಮಳೆ ಕಡಿಮೆ ಎಂಬ ಕಾರಣ ತುಂಬುವುದು ಕಷ್ಟಕರ. ಜಲಾಶಯ 33 ಅಡಿ ಎತ್ತರವಿದ್ದು, ಅರ್ಧ ಟಿಎಂಸಿ ಅಡಿ ನೀರು ಹಿಡಿದಿಡುವ ಸಾಮರ್ಥ್ಯವಿದೆ. 900 ಮೀಟರ್ ವಿಸ್ತೀರ್ಣವಿದ್ದು, 2,600 ಹೆಕ್ಟೇರ್ ಅಚ್ಚುಕಟ್ಟಿಗೆ ನೀರುಣಿಸುವ ಶಕ್ತಿ ಹೊಂದಿದೆ. 5 ಕ್ಲಸ್ಟರ್ ಗೇಟ್‌ಗಳಿದ್ದು ಎಡದಂಡೆ, ಬಡದಂಡೆ ಸೇವಾ ನಾಲೆ ನಿರ್ಮಿಸಲಾಗಿದೆ.
‘ಬಲದಂಡೆ ನಾಲೆ 14 ಕಿ.ಮೀ, ಎಡದಂಡ ನಾಲೆ 18 ಕಿ.ಮೀ ಉದ್ದವಿದೆ. ಅಶೋಕ ಸಿದ್ದಾಪುರ, ಅಮಕುಂದಿ, ಹಿರೇಕೆರೆಹಳ್ಳಿ, ಚಿಕ್ಕನಹಳ್ಳಿ, ನಾಗಸಮುದ್ರ ಸೇರಿ 7 ಕೆರೆಗಳು ವ್ಯಾಪ್ತಿಗೆ ಬರುತ್ತದೆ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ಪರಿಣಾಮ ಪಟ್ಟಣ ಪಂಚಾಯಿತಿಗೆ ಜಲಾಶಯದ ಅವಶ್ಯಕತೆ ಇದೆ. ಆದ್ದರಿಂದ ಸಿಬ್ಬಂದಿ, ಕಾವಲುಗಾರರ ನೇಮಕವನ್ನು ಪಟ್ಟಣ ಪಂಚಾಯಿತಿ ಮಾಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಕಳೆದ ವರ್ಷ ಕೆಲವರು ರಾತ್ರಿ ವೇಳೆ ಗೇಟ್‌ಗಳಿಗೆ ಪದೇಪದೇ ಹಾನಿ ಮಾಡಿ ನೀರು ಬಿಟ್ಟುಕೊಂಡ ಕಾರಣ ಹಲವು ಅಡಿಯಷ್ಟು ನೀರು ವ್ಯರ್ಥವಾಗಿ ಹರಿದಿತ್ತು. ಆಗ ತೀವ್ರ ನೀರಿನ ಸಮಸ್ಯೆಯೂ ಎದುರಾಗಿತ್ತು.
33 ಅಡಿ ಪೈಕಿ 10 ಅಡಿಯಷ್ಟು ನೀರನ್ನು ಕುಡಿಯವ ನೀರಿಗಾಗಿ ಮೀಸಲಿಟ್ಟಿರುವುದರಿಂದ ಕೃಷಿಗೆ ಹೆಚ್ಚಿನ ಅನುಕೂಲವಾಗುತ್ತಿಲ್ಲ ಎಂಬ ಆರೋಪವೂ ಇದೆ. ಜಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯಗತವಾಗಿದೆ. ಇದರಿಂದ ಪ್ರತಿವರ್ಷ ಅಲ್ಲಿನ ಕೆರೆಗಳು ತುಂಬುವ ಕಾರಣ ಈ ಜಲಾಶಯಕ್ಕೆ ಪ್ರತಿವರ್ಷ ನೀರು ಹರಿದುಬರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೂ ಶಾಶ್ವತ ಯೋಜನೆ ಅನುಷ್ಠಾನಕ್ಕೆ ಜಲಾಶಯಕ್ಕೆ ನೀರು ಹರಿಸಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ವಿದ್ಯುತ್ ಸಂಪರ್ಕ ಕಲ್ಪಿಸಲು ಟೆಂಡರ್ ಕರೆಯಲಾಗಿದೆ ಹೊಸದಾಗಿ ಎಡ– ಬಲದಂಡೆ ನಾಲೆಗಳ ದುರಸ್ತಿಗೆ ₹ 2 ಕೋಟಿ ಅನುದಾನ ಮಂಜೂರಾಗಿದೆ. ಸಿಬ್ಬಂದಿ ನೇಮಕಾತಿ ಅವಶ್ಯಕತೆ ಇದೆಜಿ. ರಮೇಶ್ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್
ಜಲಾಶಯ ಮುಂಭಾಗದಲ್ಲಿ ಸಾಕಷ್ಟು ಸ್ಥಳವಿದ್ದು ಇಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕು. ಆ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಹಿಂದುಳಿದ ತಾಲ್ಲೂಕಿನಲ್ಲಿ ಪ್ರವಾಸಿತಾಣ ಸ್ಥಾಪನೆಯಾದಂತಾಗುತ್ತಿದೆ. ಈ ವರ್ಷ ಜಲಾಶಯದಲ್ಲಿ ನೀರು ಹೆಚ್ಚಾದಾಗ ಸಾವಿರಾರು ಜನರು ಬಂದು ವೀಕ್ಷಿಸಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.