ADVERTISEMENT

ಚಿತ್ರದುರ್ಗ | ಗೋಶಾಲೆ: ಜಾನುವಾರುಗಳಿಗೆ ಇಲ್ಲ ನೆರಳು

ಜಿ.ಬಿ.ನಾಗರಾಜ್
Published 18 ಮಾರ್ಚ್ 2024, 6:45 IST
Last Updated 18 ಮಾರ್ಚ್ 2024, 6:45 IST
ಪರಶುರಾಂಪುರ ಹೋಬಳಿ ವ್ಯಾಪ್ತಿಯ ಚೌಳೂರು ಗೇಟ್ ಗೋಶಾಲೆಯಲ್ಲಿ ಮರ ಗಿಡಗಳ ಆಸರೆ ಪಡೆದ ಎಮ್ಮೆಗಳು
ಪರಶುರಾಂಪುರ ಹೋಬಳಿ ವ್ಯಾಪ್ತಿಯ ಚೌಳೂರು ಗೇಟ್ ಗೋಶಾಲೆಯಲ್ಲಿ ಮರ ಗಿಡಗಳ ಆಸರೆ ಪಡೆದ ಎಮ್ಮೆಗಳು   

ಚಿತ್ರದುರ್ಗ: ಬರ ಪರಿಸ್ಥಿತಿಯಲ್ಲಿ ಮೇವು ಕೊರತೆಯಿಂದ ಬಳಲುತ್ತಿರುವ ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗಳು ನೆಪಮಾತ್ರಕ್ಕೆ ಕಾರ್ಯ ನಿರ್ವಹಿಸುತ್ತಿವೆ. ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸದಿರುವುದರಿಂದ  ದಿನವಿಡೀ ಬಿಸಿಲಿನಲ್ಲಿ ಬೇಯುತ್ತಿವೆ.

ಜಿಲ್ಲೆಯಲ್ಲಿ ಸದ್ಯ 9 ಗೋಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಮೇವಿನ ಲಭ್ಯತೆ ನಾಲ್ಕು ವಾರಕ್ಕೆ ಕುಸಿದ ಪರಿಣಾಮ ಒಂದೂವರೆ ತಿಂಗಳ ಹಿಂದೆಯೇ ಗೋಶಾಲೆಗಳನ್ನು ತೆರೆಯಲಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 4, ಮೊಳಕಾಲ್ಮುರು ತಾಲ್ಲೂಕಿನಲ್ಲಿ 2, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ತಲಾ ಒಂದು ಗೋಶಾಲೆ ಕಾರ್ಯಾರಂಭಗೊಂಡಿವೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗೋಶಾಲೆ ಹೊರತುಪಡಿಸಿ ಉಳಿದೆಡೆ ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಇಲ್ಲ.

2017, 2018ರಲ್ಲಿ ಜಿಲ್ಲೆ ಬರ ಪರಿಸ್ಥಿತಿಯನ್ನು ಎದುರಿಸಿತ್ತು. ಜಾನುವಾರು ರಕ್ಷಣೆಗೆ ಆಗ ಗೋಶಾಲೆ ತೆರೆಯಲಾಗಿತ್ತು. 2019–20ರ ಬಳಿಕ ಉತ್ತಮ ಮಳೆಯಾಗಿದ್ದರಿಂದ ಗೋಶಾಲೆಯ ಅಗತ್ಯ ಬಿದ್ದಿರಲಿಲ್ಲ. ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣ ಮಳೆ ಸುರಿಯದಿರುವುದರಿಂದ ಜಾನುವಾರು ಮೇವು, ನೀರಿಗೂ ತತ್ವಾರ ಉಂಟಾಗಿದೆ.

ADVERTISEMENT

‘ರೈತರ ಬೇಡಿಕೆಗೆ ಅನುಗುಣವಾಗಿ ಗೋಶಾಲೆ ತೆರೆಯುವ ಕುರಿತು ಶಿಫಾರಸು ಮಾಡಲಾಗುತ್ತಿದೆ. ಶಾಸಕರ ಅಧ್ಯಕ್ಷತೆಯಲ್ಲಿರುವ ತಾಲ್ಲೂಕು ಕಾರ್ಯಪಡೆಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಹೊಳಲ್ಕೆರೆ ತಾಲ್ಲೂಕಿನ ಗೋಶಾಲೆ ಶನಿವಾರವಷ್ಟೇ ಉದ್ಘಾಟನೆಗೊಂಡಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಗೋಶಾಲೆಗೆ ಬೇಡಿಕೆ ಇಲ್ಲ. ಮೇವು, ನಿರ್ವಹಣೆಯ ಹೊಣೆಯನ್ನು ಕಂದಾಯ ಇಲಾಖೆ ನಿಭಾಯಿಸುತ್ತಿದೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕಿ ಡಾ.ಜಿ.ಇಂದಿರಾ ಬಾಯಿ ತಿಳಿಸಿದ್ದಾರೆ.

ದಿನಕ್ಕೆ 6 ಕೆ.ಜಿ ಮೇವು: 

ಗೋಶಾಲೆ ನಿತ್ಯ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ. ಮೇವು ಅಗತ್ಯ ಇರುವವರು ಜಾನುವಾರುಗಳೊಂದಿಗೆ ಗೋಶಾಲೆಗೆ ಬಂದು ಸಂಜೆ ಮನೆಗೆ ಮರಳಬೇಕು. ಪ್ರತಿ ಜಾನುವಾರುಗೆ ದಿನವೊಂದಕ್ಕೆ ಆರು ಕೆ.ಜಿ ಮೇವು ನೀಡಲಾಗುತ್ತದೆ. ಕರುಗಳಿಗೆ 4 ಕೆ.ಜಿ. ಮೇವು ನಿಗದಿಪಡಿಸಲಾಗಿದೆ. ಭತ್ತ, ಜೋಳದ ಮೇವು ಲಭ್ಯ ಇದೆ. ಹಸಿ ಮೇವು ನೀಡುವಂತೆ ರೈತರು ಬೇಡಿಕೆ ಇಡುತ್ತಿದ್ದಾರೆ. ನೀರಿನ ವ್ಯವಸ್ಥೆ ಬಹುತೇಕ ಕಡೆ ಅಚ್ಚುಕಟ್ಟಾಗಿದೆ.

ಗೋಶಾಲೆಯಲ್ಲಿ ತಂಗುವ ವ್ಯವಸ್ಥೆ ಇಲ್ಲದ ಕಾರಣಕ್ಕೆ ದೂರದ ಊರುಗಳ ಜಾನುವಾರುಗಳಿಗೆ ಈ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುರುವನೂರು ಗೋಶಾಲೆಯಲ್ಲಿ ನೂರಕ್ಕೂ ಅಧಿಕ ಜಾನುವಾರುಗಳಿವೆ. ಇದರಲ್ಲಿ ಕಡಬನಕಟ್ಟೆಯ ಎರಡು ಜೊತೆ ಎತ್ತುಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲವೂ ತುರುವನೂರು ಗ್ರಾಮಕ್ಕೆ ಸೇರಿವೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋಬಳಿಗೆ ಒಂದು ಗೋಶಾಲೆ ತೆರೆಯಲಾಗಿದೆಯಾದರೂ ಎಲ್ಲ ಹಳ್ಳಿಯ ರೈತರು ಇದರ ಪ್ರಯೋಜನ ಪಡೆಯಲು ಆಗುತ್ತಿಲ್ಲ.

ಗಿಡ, ಮರಗಳ ಆಸರೆ:

ಗೋಶಾಲೆ ತೆರೆದು ಮೇವು ಹಾಗೂ ನೀರಿನ ಸೌಲಭ್ಯ ಕಲ್ಪಿಸಿರುವುದನ್ನು ಹೊರತುಪಡಿಸಿದರೆ ಉಳಿದ ಮೂಲಸೌಲಭ್ಯ ಒದಗಿಸಿಲ್ಲ. ಬೆಳಿಗ್ಗೆ ಬರುವ ಜಾನುವಾರುಗಳು ಸಂಜೆಯವರೆಗೆ ಬಿಸಿಲಿನಲ್ಲಿಯೇ ಮೇವು ಮೆಲುಕು ಹಾಕುವ ಸ್ಥಿತಿ ಇದೆ. ಜಾನುವಾರು ಸ್ಥಿತಿ ಕಂಡು ಮರುಗಿದ ರೈತರು ಗೋಶಾಲೆ ಸಮೀಪದ ಗಿಡ ಮತ್ತು ಮರಗಳ ಬಳಿ ಜಾನುವಾರುಗಳಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ರೈತರ ಒತ್ತಡಕ್ಕೆ ಮಣಿದು ತುರುವನೂರು ಗೋಶಾಲೆಯಲ್ಲಿ ಮಾತ್ರ ತೆಂಗಿನ ಗರಿಯ ನೆರಳಿನ ವ್ಯವಸ್ಥೆ ಮಾಡಿಕೊಳ್ಳಲು ತಾಲ್ಲೂಕು ಆಡಳಿತ ಅವಕಾಶ ಕಲ್ಪಿಸಿದೆ.

‘ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಇಲ್ಲ. ಬಿಸಿಲಲ್ಲಿ ಕಟ್ಟಿಕೊಳ್ಳುವುದಕ್ಕಿಂತ ಕೊಟ್ಟಿಗೆಯಲ್ಲಿ ಬಿಡುವುದೇ ಲೇಸು. ನೆರಳಿನ ವ್ಯವಸ್ಥೆ ಕಲ್ಪಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯ ಜಾನುವಾರು ಬರಲಿವೆ’ ಎನ್ನುತ್ತಾರೆ ತುರುವನೂರಿನ ತಿಪ್ಪೇಸ್ವಾಮಿ.

ಪರಶುರಾಂಪುರ ಹೋಬಳಿ ವ್ಯಾಪ್ತಿಯ ಚೌಳೂರು ಗೇಟ್ ಗೋಶಾಲೆಯಲ್ಲಿ ಮರ ನೆರಳಿನಲ್ಲಿರುವ ಎಮ್ಮೆಗಳು
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗೋಶಾಲೆಯಲ್ಲಿ ತೆಂಗಿನ ಗರಿ ಬಳಸಿಕೊಂಡು ರೈತರೇ ನಿರ್ಮಿಸಿಕೊಂಡ ಚಪ್ಪರ
ನಾಯಕನಹಟ್ಟಿಯ ಮಲ್ಲೂರಹಳ್ಳಿ ಭಾಗದ ಜಾನುವಾರುಗಳು ಮೇವಿಗಾಗಿ ಪರಿತಪಿಸುತ್ತಿರುವುದು

Quote - ಗೋಶಾಲೆಗೆ ಜಾನುವಾರು ಕರೆತಂದರೆ ಇಡೀ ದಿನ ಒಬ್ಬರು ಜೊತೆಗೆ ಇರಬೇಕು. ಮೇವು ನೀಡಿದರೆ ಕೊಟ್ಟಿಗೆಯಲ್ಲಿ ಕಟ್ಟಿ ನೋಡಿಕೊಳ್ಳುತ್ತೇವೆ. ಕೂಲಿಗೆ ಹೋಗಲು ನಮಗೂ ಅನುಕೂಲವಾಗುತ್ತದೆ ತಿಪ್ಪೇಸ್ವಾಮಿ ತುರುವನೂರು

Quote - ಮೇವಿನ ಬೀಜದ ಕಿಟ್‌ಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿದೆ. ಡಿಸೆಂಬರ್‌ನಿಂದ ಈ ವ್ಯವಸ್ಥೆ ಮಾಡಿದ್ದರಿಂದ ಇನ್ನೂ ನಾಲ್ಕು ವಾರಗಳಿಗೆ ಸಾಕಾಗುಷ್ಟು ಮೇವು ಜಿಲ್ಲೆಯಲ್ಲಿ ಲಭ್ಯ ಇದೆ ಡಾ.ಜಿ.ಇಂದಿರಾ ಬಾಯಿ ಉಪನಿರ್ದೇಶಕಿ ಪಶುಪಾಲನಾ ಇಲಾಖೆ

Cut-off box - ಕಾರ್ಮಿಕರಿಗೆ ಸಿಗದ ಕೂಲಿ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿಗೆರಹಳ್ಳಿ ಗೋಶಾಲೆಯಲ್ಲಿ ಕೆಲಸ ಮಾಡಿದ 21 ಕಾರ್ಮಿಕರಿಗೆ ಐದು ವರ್ಷ ಕಳೆದರೂ ಕೂಲಿ ಸಿಕ್ಕಿಲ್ಲ. ತಹಶೀಲ್ದಾರ್ ಸೇರಿ ಅನೇಕರನ್ನು ಗೋಗರೆದರೂ ಕಾರ್ಮಿಕರಿಗೆ ಪ್ರಯೋಜನವಾಗಿಲ್ಲ. 2018–19ರಲ್ಲಿ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿತ್ತು. ಮುತ್ತಿಗೆರಹಳ್ಳಿ ಗೋಶಾಲೆಯ ಕೆಲಸಕ್ಕೆ 21 ಕಾರ್ಮಿಕರನ್ನು ತಾಲ್ಲೂಕು ಆಡಳಿತ ನೇಮಕ ಮಾಡಿಕೊಂಡಿತ್ತು. ಎಲ್ಲರೂ 3 ತಿಂಗಳು 16 ದಿನ ಕೆಲಸ ಮಾಡಿದ್ದರು. ತಾಂತ್ರಿಕ ತೊಡಕುಗಳನ್ನು ಮುಂದಿಟ್ಟು ಕೂಲಿ ನೀಡಲಿಲ್ಲ. ‘ನರೇಗಾ ಯೋಜನೆಯಲ್ಲಿ ಕೂಲಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಗೊಬ್ಬರ ಮಾರಾಟ ಮಾಡಿ ಕೂಲಿ ನೀಡುವುದಾಗಿ ಹೇಳಿದ್ದ ಅಧಿಕಾರಿಗಳು ಮಾತಿಗೆ ತಪ್ಪಿದರು’ ಎಂದು ಮೊಳಕಾಲ್ಮುರು ತಾಲ್ಲೂಕು ಸಿಪಿಐ ತಾಲ್ಲೂಕು ಕಾರ್ಯದರ್ಶಿ ಜಾಫರ್‌ ಷರೀಫ್ ಅಸಮಾಧಾನ ವ್ಯಕ್ತಪಡಿಸಿದರು.

Cut-off box - ಗೋಶಾಲೆಗೆ ಬರುತ್ತಿಲ್ಲ ಜಾನುವಾರು ತಿಮ್ಮಯ್ಯ.ಜೆ ಪರಶುರಾಂಪುರ ಪರಶುರಾಂಪುರ: ದೂರದ ಊರುಗಳಿಂದ ಜಾನುವಾರುಗಳನ್ನು ಕರೆದುಕೊಂಡು ಬರುವುದು ತೊಂದರೆಯಾಗುತ್ತಿರುವ ಜೊತೆಗೆ ಗೋಶಾಲೆಯಲ್ಲಿ ನೆರಳಿನ ವ್ಯವಸ್ಥೆ ಇಲ್ಲದಿರುವುದು ಚೌಳೂರು ಗೇಟ್ ಗೋಶಾಲೆಯಲ್ಲಿ ದನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗಿದೆ. ಹೋಬಳಿಯಲ್ಲಿ ದನ ಮತ್ತು ಎಮ್ಮೆಗಳ ಸಂಖ್ಯೆ 18075 ಇದ್ದು ಕುರಿ ಮೇಕೆಗಳ ಸಂಖ್ಯೆ 123935 ರಷ್ಟಿದೆ. ಈ ಹಿಂದೆ ನಾಗಗೊಂಡನಹಳ್ಳಿ ಗೋಶಾಲೆ ಮತ್ತು ಪಿ.ಗೌರಿಪುರ ಗೇಟ್‌ನಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿತ್ತು. ಅದರೆ ಈಬಾರಿ ಒಂದು ಕಡೆ ಮಾತ್ರ ಗೋಶಾಲೆ ತೆರೆದಿರುವುದರಿಂದ ಜಾನುವಾರುಗಳಿಗೆ ತುಂಬಾ ತೊಂದರೆಯಾಗಿದೆ. ಹಿಂದೆಲ್ಲಾ 2500-3000ದವರೆಗೂ ಈ ಗೋಶಾಲೆಯಲ್ಲಿ ದನಗಳು ದಾಖಲಾಗುತ್ತಿದ್ದವು. ಈ ವರ್ಷ 360-380 ದನಗಳು ಮಾತ್ರ ಗೋಶಾಲೆಗೆ ಬರುತ್ತಿವೆ. ಗೋಶಾಲೆ ಸಮೀಪದ ಗಿಡ ಮರಗಳ ನೆರಳಿನಲ್ಲಿ ಜಾನುವಾರು ಕಟ್ಟಿ ಮೇವು ನೀಡಲಾಗುತ್ತಿದೆ. ಬೀಸಿಲು ತಾಪ ಹೆಚ್ಚಾಗಿದ್ದು ದನಕರುಗಳಿಗೂ ತೊಂದರೆಯಾಗುತ್ತಿದೆ. ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ರೈತರು. ಗೋಶಾಲೆಯಲ್ಲಿ 25-30 ದನಗಳಿಗೆ ಮಾತ್ರ ತಾತ್ಕಾಲಿಕ ಚಪ್ಪರ ಹಾಕಲಾಗಿದೆ. ಉಳಿದ ಜಾನುವಾರುಗಳು ಬಿಸಿಲಿನಲ್ಲಿಯೇ ಇರಬೇಕಾಗಿದೆ. ಗೋಶಾಲೆಯ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂದು ಮೇವು ಬ್ಯಾಂಕ್ ತೆರೆಯಬೇಕು ಹಾಗೂ ಕುರಿ-ಮೇಕೆಗಳಿಗೂ ಮೇವು ವಿತರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Cut-off box - 48 ಹಳ್ಳಿಗೆ ಒಂದೇ ಗೋಶಾಲೆ ವಿ.ಧನಂಜಯ ನಾಯಕನಹಟ್ಟಿ: ಹೋಬಳಿಯ 48 ಹಳ್ಳಿಗಳಿಗೆ ಒಂದೇ ಗೋಶಾಲೆ ಇದೆ. ಸಾವಿರಾರು ಜಾನುವಾರುಗಳಿಗೆ ಹಿರೆಕೆರೆ ಕಾವಲು ಗೋಶಾಲೆಯಲ್ಲಿ ಮೇವು ಲಭ್ಯವಾಗುತ್ತಿಲ್ಲ. ನಾಯಕನಹಟ್ಟಿ ಹೋಬಳಿಯಲ್ಲಿ 8 ಗ್ರಾಮ ಪಂಚಾಯಿತಿಗಳಿವೆ. ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಸಕಾಲಕ್ಕೆ ಮಳೆ-ಬೆಳೆಯಿಲ್ಲದೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೋಮಾಳ ಅಡವಿ ಹುಲ್ಲುಗಾವಲುಗಳು ಒಣಗಿವೆ. ಇದರಿಂದ ರೈತರು ಜಾನುವಾರುಗಳಿಗೆ ಮೇವನ್ನು ಒದಗಿಸಲು ಹರಸಾಹಸ ಪಡುತ್ತಿದ್ದಾರೆ. ಈ ವರ್ಷ ಬಿಸಲಿನ ತಾಪ ಹೆಚ್ಚಾಗಿದ್ದು ನಿತ್ಯ 36ರಿಂದ 40 ಡಿಗ್ರಿ ತಾಪಮಾನವಿದೆ. ಇದರಿಂದ ಜಾನುವಾರು ನಿತ್ರಾಣಗೊಳ್ಳುತ್ತಿವೆ. ಹಿರೇಕೆರೆ ಕಾವಲಿನಲ್ಲಿ ಈಚೆಗೆ ಗೋಶಾಲೆ ಆರಂಭವಾಗಿದ್ದು ನೆಲಗೇತನಹಟ್ಟಿ ಗೌಡಗೆರೆ ನಾಯಕನಹಟ್ಟಿ ಭಾಗದ ಸಾವಿರಾರು ಜಾನುವಾರುಗಳಿಗೆ ಮೇವನ್ನು ಒದಗಿಸಲಾಗುತ್ತಿದೆ. ಆದರೆ ಅಬ್ಬೇನಹಳ್ಳಿ ಮಲ್ಲೂರಹಳ್ಳಿ ಎನ್.ಮಹದೇವಪುರ ಎನ್.ದೇವರಹಳ್ಳಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 30ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಜಾನುವಾರುಗಳಿಗೆ ಮೇವಿನ ಅನುಕೂಲವಿಲ್ಲದಂತಾಗಿದೆ. ಹಿರೆಕೆರೆ ಕಾವಲು ಗೋಶಾಲೆಯು ಮಲ್ಲೂರಹಳ್ಳಿ ಅಬ್ಬೇನಹಳ್ಳಿ ನೇರಲಗುಂಟೆ ತಿಮ್ಮಪ್ಪಯ್ಯನಹಳ್ಳಿ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಗಳ ಹಳ್ಳಿಗಳಿಂದ ಸುಮಾರು 10ರಿಂದ 15ಕಿ.ಮೀ ದೂರದಲ್ಲಿದೆ. ನಿತ್ಯ ರೈತರು ಗೋಶಾಲೆಗಳಿಗೆ ರಾಸುಗಳನ್ನು ಕರೆತರುವುದು. ದಿನವೆಲ್ಲಾ ಮೇಯಿಸಿಕೊಂಡು ಸಂಜೆ ವಾಪಸ್ ಮನೆಗಳಿಗೆ ಕರೆದುಕೊಂಡು ಹೋಗುವುದೇ ಕಾಯಕವಾಗಿದೆ. ಜಾನುವಾರು ನಿತ್ಯ 10ರಿಂದ 15ಕಿ.ಮೀ ನಡೆಯುವುದರಿಂದ ತುಂಬಾ ದಣಿಯುತ್ತಿವೆ. ಈ ಹಿಂದೆ ಮಲ್ಲೂರಹಳ್ಳಿ ಸೇರಿ ಹಲವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರ ಮೇವು ಬ್ಯಾಂಕ್‍ಗಳನ್ನು ತೆರೆದಿತ್ತು. ಗೋಶಾಲೆಯಿಂದ ದೂರವಿರುವ ಹಳ್ಳಿಗಳ ರೈತರು ತಮ್ಮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಮೇವು ಬ್ಯಾಂಕ್‌ಗಳಿಗೆ ತೆರಳಿ ಮೇವು ಪಡೆಯುತ್ತಿದ್ದರು. ಪ್ರಸಕ್ತ ವರ್ಷ ಭೀಕರ ಬರ ಪರಿಸ್ಥಿತಿ ಮತ್ತು ಮೇವಿನ ಅಭಾವವಿದ್ದರೂ ಗೋಶಾಲೆಯಿಂದ ದೂರವಿರುವ ರೈತರ ಜಾನುವಾರುಗಳಿಗೆ ಮೇವು ಬ್ಯಾಂಕ್‍ಗಳನ್ನು ತೆರೆಯುವ ಕಾರ್ಯಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ದೇವರೆತ್ತುಗಳಿಗೂ ಮೇವು ಕೊರತೆ: ಹೋಬಳಿಯ ನೆಲಗೇತನಹಟ್ಟಿಯ ಚನ್ನಕೇಶವ ದೇವರು ಬೋಸೆದೇವರಹಟ್ಟಿಯ ಬೋಸೆರಂಗಸ್ವಾಮಿ ರಾಮದುರ್ಗದ ಬೋರೆದೇವರು ದಾಸರಮುತ್ತೇನಹಳ್ಳಿಯ ಓಬಳದೇವರು ನೇರಲಗುಂಟೆಯ ಬಂಗಾರದೇವರು ವರವು ಬೊಮ್ಮದೇವರು ಮಲ್ಲೂರಹಳ್ಳಿ ರಾಜಲುದೇವರು ಓಬಳದೇವರು ಬೊಮ್ಮದೇವರು ಅಬ್ಬೇನಹಳ್ಳಿ ವಡಲೇಶ್ವರ ಚನಬಸಯ್ಯನಹಟ್ಟಿ ಬೋರೆದೇವರು ಜಾಗನೂರಹಟ್ಟಿ ಗಾದ್ರಿಪಾಲಯನಾಯಕ ಭೋಮಗೊಂಡನಹಳ್ಳಿ ಓಬಳೇಶ್ವರಸ್ವಾಮಿ ಜೋಗಿಹಟ್ಟಿ ಬಾಲೇರಂಗನಾಥಸ್ವಾಮಿ ಸೇರಿ ಇನ್ನೂ ಹಲವು ಗ್ರಾಮಗಳಲ್ಲಿ ದೇವರೆತ್ತುಗಳಿವೆ. ‘ದೇವರೆತ್ತುಗಳಿಗೆ ಆಯಾ ಗುಡಿಕಟ್ಟಿನ ಭಕ್ತರು ಸ್ವಂತ ಹಣ ನೀಡಿ ಮೇವು ಖರೀದಿಸಿ ನೀಡುತ್ತಿದ್ದಾರೆ. ಈ ಮೇವು ಸಾಕಾಗದೇ ದೇವರೆತ್ತುಗಳು ಪರಿತಪಿಸುತ್ತಿವೆ. ತಕ್ಷಣವೇ ಜಿಲ್ಲಾಡಳಿತ ನಾಯಕನಹಟ್ಟಿ ಹೋಬಳಿಯಲಿ ಗೋಶಾಲೆ ಮತ್ತು ಮೇವು ಬ್ಯಾಂಕ್ ತೆರೆಯಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ರೈತ ಮಲ್ಲೂರಹಳ್ಳಿ ಬಿ.ಕಾಟಯ್ಯ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.