ನಾಯಕನಹಟ್ಟಿ: ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಹೋಬಳಿಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಕೊಳೆರೋಗಕ್ಕೆ ತುತ್ತಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ಎಂಟು ಎಕರೆ ಪ್ರದೇಶದಲ್ಲಿ 48 ಕೆ.ಜಿ. ಈರುಳ್ಳಿ ಬೀಜ ಹಾಕಿದ್ದೆವು. ಕೆ.ಜಿ. ಈರುಳ್ಳಿ ಬೀಜಕ್ಕೆ ₹ 1,300ರಿಂದ ₹ 1,800ರಂತೆ ವಿವಿಧ ಕಂಪನಿಗಳಿಂದ ಬೀಜ ಖರೀದಿಸಿದ್ದೆವು. ಬೇಸಾಯ, ಕಳೆ, ಗೊಬ್ಬರ, ಔಷಧ, ಕಟಾವು, ಈರುಳ್ಳಿ ಖಾಲಿ ಚೀಲ ಸೇರಿ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದು ಸಂಸ್ಕರಣೆ ಮಾಡಲು ಅಂದಾಜು ₹ 70,000ದಿಂದ ₹ 80,000 ವೆಚ್ಚವಾಗುತ್ತದೆ. ಹೋಬಳಿಯಲ್ಲಿ ಕಳೆದ 10 ದಿನಗಳಿಂದ ಸುರಿದ ನಿರಂತರ ಮಳೆ ಮತ್ತು ಮೋಡ ಕವಿದ ವಾತವರಣದಿಂದ ಈರುಳ್ಳಿ ಬೆಳೆಗೆ ಕೊಳೆರೋಗ ಮತ್ತು ಸುಟ್ಟ ರೋಗ ತಗುಲಿದ್ದು, ದಿಕ್ಕು ತೋಚದಾಗಿದೆ’ ಎಂದು ರಾಮದುರ್ಗದ ರೈತ ಜಿ. ಅಜ್ಜಯ್ಯ ಅಳಲು ತೋಡಿಕೊಂಡರು.
‘ಈ ವರ್ಷ ಬಂಪರ್ ಬೆಲೆಯ ನಿರೀಕ್ಷೆಯಲ್ಲಿ ಬ್ಯಾಂಕ್ ಹಾಗೂ ಖಾಸಗಿಯವರಿಂದ ಕೈ ಸಾಲ ತೆಗೆದುಕೊಂಡು ಈರುಳ್ಳಿ ಬೆಳೆಯಲಾಗಿದೆ. ಆದರೀಗ ಮಳೆಯಿಂದಾಗಿ ಈರುಳ್ಳಿ ಬೆಳೆಯ ದಂಟಿನೊಳಗೆ ನೀರು ಹೋಗಿ ಈರುಳ್ಳಿ ಗೆಡ್ಡೆ ಒಳಗಿನಿಂದಲೇ ಕೊಳೆಯುತ್ತಿದೆ. ಜತೆಗೆ ತೇವಾಂಶ ಹೆಚ್ಚಾಗಿ ಈರುಳ್ಳಿಯ ಮೇಲಿನ ಪೊರೆ ಕಳಚಿ ಗೆಡ್ಡೆಗಳು ಬಿಳಿ ಬಣ್ಣಕ್ಕೆ ತಿರುಗಿವೆ. ಹಾಕಿದ ಬಂಡವಾಳವೂ ವಾಪಸ್ ಕೈಸೇರುವುದು ಅನುಮಾನವಿದೆ’ ಎಂದು ರಾಮದುರ್ಗದ ಈರುಳ್ಳಿ ಬೆಳೆಗಾರ ಎಂ.ಚಂದ್ರಶೇಖರ ಮತ್ತು ಜಿ.ನಾಗರಾಜ ಬೇಸರ ವ್ಯಕ್ತಪಡಿಸಿದರು.
‘ಈರುಳ್ಳಿ ಬೆಳೆಗೆ ರೋಗ ತಗುಲಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಮೂಡಿಸಿದೆ. ನಷ್ಟಕ್ಕೆ ತುತ್ತಾಗಿರುವ ರೈತರಿಗೆ ಬೆಳೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರೈತ ಜಿ.ಅಜ್ಜಯ್ಯ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.