ADVERTISEMENT

837 ಶ್ವಾನಗಳಿಗಷ್ಟೇ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ

ಕೋಟೆನಗರಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಳ, ಸಾರ್ವಜನಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 6:28 IST
Last Updated 13 ನವೆಂಬರ್ 2024, 6:28 IST
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಚಿತ್ರದುರ್ಗ ನಗರದಲ್ಲಿ ಕಾರ್ಮಿಕರು ಬೀದಿನಾಯಿ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿರುವುದು
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಚಿತ್ರದುರ್ಗ ನಗರದಲ್ಲಿ ಕಾರ್ಮಿಕರು ಬೀದಿನಾಯಿ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿರುವುದು   

ಚಿತ್ರದುರ್ಗ: ನಗರದಲ್ಲಿ ಬೀದಿನಾಯಿಗಳ ಹಾವಳಿ ತೀವ್ರಗೊಂಡಿದ್ದು, ಸಾರ್ವಜನಿಕರು ಓಡಾಡಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯ ವತಿಯಿಂದ 837 ನಾಯಿಗಳಿಗೆ ಮಾತ್ರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿರುವುದು ಜನರ ಅಸಮಾಧಾನಕ್ಕೆ ಕಾಣವಾಗಿದೆ.

ನಗರದಾದ್ಯಂತ ಸಾವಿರಾರು ಬೀದಿನಾಯಿಗಳಿವೆ ಎಂದು ಅಂದಾಜು ಮಾಡಲಾಗಿದೆ. 2021ರ ನಂತರ ನಗರದಲ್ಲಿ ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಆಗಲೂ ಬರೀ 1,003 ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈಗ ಅದಕ್ಕಿಂತಲೂ ಕಡಿಮೆ ನಾಯಿಗಳಿಗೆ ಆಪರೇಷನ್‌ ಮಾಡಿರುವುದು ನಾಯಿಗಳ ಸಂಖ್ಯೆ ದ್ವಿಗುಣಗೊಳ್ಳಲು ಕಾರಣವಾಗಿದೆ.

ಈ ಬಾರಿ 428 ಗಂಡು ನಾಯಿ, 409 ಹೆಣ್ಣು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಜೊತೆಗೆ ರೇಬಿಸ್‌ ತಡೆ ಲಸಿಕೆ ಹಾಕಲಾಗಿದೆ. ಚಿಕಿತ್ಸೆಯ ನಂತರ ಅವುಗಳನ್ನು ಬೀದಿಯಲ್ಲಿಯೇ ಬಿಡಲಾಗಿದೆ. ಶೇ 5ಕ್ಕಿಂತಲೂ ಕಡಿಮೆ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಗರದಾದ್ಯಂತ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, ಜನರು ಭಯದಿಂದಲೇ ರಸ್ತೆಗಳಲ್ಲಿ ಓಡಾಡುವ ಪರಿಸ್ಥಿತಿ ಮುಂದುವರಿದಿದೆ.

ADVERTISEMENT

ಅನುದಾನದ ಮಿತಿ:

ನಗರಸಭೆಗೆ ಅನುದಾನದ ಮಿತಿ ಇದ್ದು, ಲಭ್ಯ ಹಣಕಾಸು ಸೌಲಭ್ಯದಲ್ಲಿ ಮಾತ್ರ ಬೀದಿನಾಯಿಗಳ ಶಸ್ತ್ರಚಿಕಿತ್ಸೆಗೆ ಟೆಂಡರ್‌ ನೀಡಲಾಗಿದೆ. ಬೆಂಗಳೂರಿನ ‘ಕೇರ್‌ ಫಾರ್‌ ವಾಯ್ಸ್‌ಲೆಸ್‌ ಅನಿಮಲ್‌ ಟ್ರಸ್ಟ್‌’ ಟೆಂಡರ್‌ ಪಡೆದು ಕಾರ್ಯಾಚರಣೆ ನಡೆಸಿದೆ.

ಸೆ.9ರಂದು ಟ್ರಸ್ಟ್‌ಗೆ ಕಾರ್ಯಾದೇಶ ನೀಡಲಾಗಿತ್ತು. ಅಕ್ಟೋಬರ್‌ ಮೊದಲ ವಾರದಲ್ಲಿ ಕಾರ್ಯಾಚರಣೆ ನಡೆಸಿದ ಟ್ರಸ್ಟ್‌ ಸಿಬ್ಬಂದಿ ನ.25ರವರೆಗೂ ನಾಯಿ ಹಿಡಿದಿದ್ದಾರೆ. 2 ವಾಹನಗಳಲ್ಲಿ ಅಸ್ಸಾಂ ಮೂಲಕ 12 ಕಾರ್ಮಿಕರು ಕಾರ್ಯಾಚರಣೆ ನಡೆಸಿದ್ದಾರೆ. ಪಶು ಸಂಗೋಪನಾ ಇಲಾಖೆಯ ವೈದ್ಯರ ನೇತೃತ್ವದಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್‌ ತಡೆ ಚುಚ್ಚುಮದ್ದು ಹಾಕಲಾಗಿದೆ.

ಖರ್ಚಾದ ಹಣವೆಷ್ಟು?:

ಪ್ರತಿ ನಾಯಿ ಹಿಡಿದು ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ಹಾಕಲು ₹ 1,732 ಖರ್ಚಾಗಿದೆ. 837 ನಾಯಿಗಳಿಂದ 14,49,684 ಖರ್ಚು ತಗುಲಿದೆ. ಇತರ ಖರ್ಚುಗಳು ಸೇರಿ ಒಟ್ಟಾರೆ ₹ 15 ಲಕ್ಷಕ್ಕೂ ಅಧಿಕ ವೆಚ್ಚ ತಗುಲಿದೆ.

ಮೊಳಕಾಲ್ಮರು ತಾಲ್ಲೂಕು ರಾಂಪುರ ಗ್ರಾಮದಲ್ಲಿ ಈಚೆಗೆ ತರಬೇತಿ ಕೇಂದ್ರವೊಂದರಿಂದ ಮನೆಗೆ ವಾಪಸಾಗುತ್ತಿದ್ದ ಬಾಲಕನೊಬ್ಬನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕೊಂದು ಹಾಕಿವೆ. ಈ ಘಟನೆಯ ನಂತರ ಇಡೀ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಭಯಪಡುವಂತಾಗಿದೆ.

ಆ ಘಟನೆಯ ನಂತರ ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಳೀಯ ಆಡಳಿತಾಧಿಕಾರಿಗಳು ನಾಯಿಗಳ ಹಾವಳಿ ತಡೆಗೆ ಮುಂದಾಗಿದ್ದಾರೆ. ಆದರೆ  ಹಲವು ಮಿತಿಗಳು ಇರುವ ಕಾರಣದಿಂದ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಜಿಲ್ಲೆಯ ವಿವಿಧೆಡೆ ಸ್ವಚ್ಛತೆಯ ಕೊರತೆ ಇರುವ ಕಾರಣ ಬೀದಿನಾಯಿಗಳ ಹಾವಳಿ ತೀವ್ರವಾಗಿದೆ. ಕೋಳಿ, ಮಾಂಸದ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು ಅದಕ್ಕೆ ನೀತಿ, ನಿಯಮಗಳಿಲ್ಲ. ಮಾಂಸದ ತ್ಯಾಜ್ಯದಿಂದಾಗಿಯೇ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ಮಾಂಸದ ಆಸೆಯಲ್ಲಿ ನಾಯಿಗಳ ವರ್ತನೆಗಳು ವಿಚಿತ್ರವಾಗುತ್ತಿದ್ದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ನಾಯಿಗಳ ನಿಯಂತ್ರಣಕ್ಕೆ ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಬೇಕು’ ಎಂದು ಪ್ರಾಧ್ಯಾಪಕ ಶಂಕರಪ್ಪ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಬೀದಿನಾಯಿಗಳು ವಿಶ್ರಾಂತಿ ಪಡೆಯುತ್ತಿರುವುದು

ಮುಂದಿನ ವರ್ಷ ಮತ್ತಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ನಗರವನ್ನು ಸ್ವಚ್ಛವಾಗಿ ಇಟ್ಟುಕೊಂಡು ಬೀದಿನಾಯಿಗಳ ಹಾವಳಿಯಿಂದ ಜನರ ರಕ್ಷಣೆಗೆ ಕ್ರಮ ವಹಿಸಲಾಗುವುದು

-ಎಂ.ರೇಣುಕಾ ನಗರಸಭೆ ಪೌರಾಯುಕ್ತೆ

ಕಾರ್ಯಾಚರಣೆಗೆ ಹಲವು ಸವಾಲು

ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ಹಾಕಲು ಹಲವು ಸವಾಲುಗಳಿದ್ದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಸವಾಲು ಎದುರಿಸಬೇಕಾಗಿದೆ. ‘ನಾಯಿಗಳನ್ನು ಹಿಡಿಯಲು ಕೇಂದ್ರ ಸರ್ಕಾರದ ಪ್ರಾಣಿ ಅಭಿವೃದ್ಧಿ ಮಂಡಳಿಯ ಅನುಮತಿ ಪಡೆಯಬೇಕಾಗಿದೆ. ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ಅವುಗಳನ್ನು ಹಿಡಿದ ಸ್ಥಳದಲ್ಲೇ ಬಿಡಬೇಕು. ಅವುಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಹಿಡಿದ ನಾಯಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವಂತಿಲ್ಲ. ಎಲ್ಲದಕ್ಕೂ ಅಂಕಿ–ಅಂಶ ವರದಿ ತಯಾರಿಸಬೇಕು. ಇಷ್ಟೆಲ್ಲಾ ಸವಾಲು ಎದುರಿಸಿ ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.