ADVERTISEMENT

ಬಲ್ಲಾಳಸಮುದ್ರ ಕೆರೆಗೆ ನೀರು ಹರಿಸಲು ಆದೇಶ

ರೈತರ ಹಲವು ವರ್ಷಗಳ ಕನಸು ನನಸು

ರವಿಕುಮಾರ್ ಸಿರಿಗೊಂಡನಹಳ್ಳಿ
Published 7 ಏಪ್ರಿಲ್ 2022, 3:55 IST
Last Updated 7 ಏಪ್ರಿಲ್ 2022, 3:55 IST
ಬಲ್ಲಾಳಸಮುದ್ರ ಕೆರೆ
ಬಲ್ಲಾಳಸಮುದ್ರ ಕೆರೆ   

ಶ್ರೀರಾಂಪುರ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹೋಬಳಿಯ ಐತಿಹಾಸಿಕ ಬಲ್ಲಾಳ ಸಮುದ್ರ ಕೆರೆಗೆ ನೀರು ಹರಿಸುವ ಯೋಜನೆಗೆ ಸಂಬಂಧಿಸಿ ಸರ್ಕಾರ 0.00422 ಟಿಎಂಸಿ ಅಡಿ ನೀರು ಕಾಯ್ದಿರಿಸಿ ಆದೇಶ ಹೊರಡಿಸಿದ್ದು ಸರ್ಕಾರದ ಆದೇಶದಿಂದ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.

ಸುಮಾರು 233 ಎಕರೆ ವಿಸ್ತೀರ್ಣ ಹೊಂದಿರುವ ಬಲ್ಲಾಳಸಮುದ್ರ ಕೆರೆಗೆ ಹೇಮಾವತಿ ನದಿಯಿಂದ ನೀರು ಹರಿಸಲು ಶಾಸಕ ಗೂಳಿಹಟ್ಟಿ ಶೇಖರ್ ಈ ಹಿಂದೆ ಸಚಿವರಾಗಿದ್ದಾಗ ಯೋಜನೆ ತಯಾರಿಸಿ ಹಣ ಬಿಡುಗಡೆ ಮಾಡಲಾಗಿತ್ತು. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಸಮೀಪದಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಪ್ರಯತ್ನವೂ ನಡೆದಿತ್ತು. ಆದರೆ ಪೈಪ್‌ಲೈನ್ ಬರುವ ಮಾರ್ಗ ಮಧ್ಯದಲ್ಲಿ ಕೆಲವು ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಮತ್ತು ಪೈಪ್‌ಗಳಲ್ಲಿ ನೀರು ಸೋರಿಕೆಯಾಗಿ ಕೊನೆಯ ಭಾಗವಾದ್ದರಿಂದ ಸರಿಯಾಗಿ ನೀರು ಬರದ ಕಾರಣ ಹಾಗೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದು ಕಾರ್ಯಸಾಧುವಲ್ಲದ ಯೋಜನೆ ಎಂದು ಅರ್ಧಕ್ಕೆ ನಿಂತುಹೋಗಿತ್ತು.

ಆದರೆ ಶಾಸಕ ಗೂಳಿಹಟ್ಟಿ ಶೇಖರ್ ಈ ವಿಚಾರವಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದರು. ಭದ್ರಾ ಯೋಜನೆಯಲ್ಲಿ ನೀರು ಹರಿಸುವಂತೆ ಸರ್ಕಾರಕ್ಕೆ ಕೋರಿದ್ದರು. ಆದರೆ ಇದು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಕೊನೆಗೆ ಈ ಬಾರಿಯ ಅಧಿವೇಶನದಲ್ಲಿ ಶಾಸಕರ ಒತ್ತಾಯಕ್ಕೆ ಮಣಿದ ಸರ್ಕಾರ ಈಗ ಭದ್ರಾ ಯೋಜನೆಯಲ್ಲಿ ಬಲ್ಲಾಳ ಸಮುದ್ರ ಕೆರೆಗೆ ನೀರು ಹರಿಸಲು ಆದೇಶ ನೀಡಿದೆ.

ADVERTISEMENT

ಈ ಕುರಿತು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅವರು ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಪೊಲ್ಲಾವರಂ ಯೋಜನೆಯ ಅಡಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನಲ್ಲಿ ಸಣ್ಣ ವಿಯರ್‌ಗಳು, ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಎಸ್‍ಸಿಪಿ –ಟಿಎಸ್‌ಪಿ ಯೋಜನೆ ಹಂಚಿಕೆ ಕಾಮಗಾರಿಗಳಿಗಾಗಿ ಮಾಡಲಾದ 1 ಟಿಎಂಸಿ ಅಡಿ ನೀರಿನ ಪೈಕಿ 0.00823 ಟಿಎಂಸಿ ಅಡಿ ನೀರು ಬಳಕೆಯಾಗಿದೆ. ಬಾಕಿ ಇರುವ ನೀರಿನ ಪ್ರಮಾಣದಲ್ಲಿ 2021-22ನೇ ಸಾಲಿನ ಎಸ್‍ಸಿಪಿ – ಟಿಎಸ್‍ಪಿ ಯೋಜನೆಯ ಅಡಿ ಬಲ್ಲಾಳಸಮುದ್ರ ಕೆರೆಗೆ ವೇದಾವತಿ ನದಿಯಿಂದ ನೀರು ಹರಿಸಲು 0.00422 ಟಿ.ಎಂ.ಸಿ. ಅಡಿ ನೀರು ಹಂಚಿಕೆ ಮಾಡಲಾಗಿದೆ ಎಂದು ನಿರ್ದೇಶನ ದಲ್ಲಿ ಹೇಳಿದ್ದಾರೆ.

₹ 5 ಕೋಟಿ ವೆಚ್ಚದ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಈ ಭಾಗದ ರೈತರ ಹಲವು ವರ್ಷಗಳ ಕನಸು ಈಡೇರಿದಂತಾಗಿದೆ.

*
3–4 ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೆ ಸಹಾಯಕ
ಬಲ್ಲಾಳ ಸಮುದ್ರ ಕೆರೆಗೆ ನೀರು ಹರಿಸುವಂತೆ ಆ ಭಾಗದ ರೈತರು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರು. ಹೇಮಾವತಿ ನದಿಯಿಂದ ನೀರು ಹರಿಸುವ ಪ್ರಯತ್ನ ಸಫಲವಾಗಲಿಲ್ಲ. ಕೆರೆಗೆ ನೀರು ಹರಿಸಲೇ ಬೇಕೆಂದು ಸತತ ಪ್ರಯತ್ನ ಮಾಡಿದ್ದೇನೆ. ಕೊನೆಗೆ ಮುಖ್ಯಮಂತ್ರಿ ನೀರು ಹರಿಸಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ಬಲ್ಲಾಳಸಮುದ್ರ ಗ್ರಾಮ ಪಂಚಾಯಿತಿ ಸೇರಿದಂತೆ 3-4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.
– ಗೂಳಿಹಟ್ಟಿ ಡಿ. ಶೇಖರ್, ಶಾಸಕರು, ಹೊಸದುರ್ಗ

*
ಈ ಯೋಜನೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಅಂತರ್ಜಲ ಹೆಚ್ಚಾಗಲಿದೆ. ತೆಂಗು, ಅಡಿಕೆ ಬೆಳೆಗಾರರಿಗೆ ತುಂಬಾ ಸಹಾಯವಾಗಲಿದೆ.
- ಶ್ರೀನಿವಾಸ್, ರೈತ, ಬಲ್ಲಾಳಸಮುದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.