ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದ ನೀರು ಹರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 23ನೇ ದಿನವಾದ ಬುಧವಾರ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ನಡೆದ ರೈತ ಮುಖಂಡರ ವಿಶೇಷ ಸಭೆಯಲ್ಲಿ ಜುಲೈ 31ರಂದು ಜವನಗೊಂಡನಹಳ್ಳಿಯಿಂದ ಹಿರಿಯೂರಿನ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ‘ನೂರಾರು ರೈತರು ಸರಣಿಯಲ್ಲಿ 23 ದಿನಗಳಿಂದ ಚಳಿ, ಮಳೆ, ಬಿಸಿಲು ಲೆಕ್ಕಿಸದೆ ಮನೆಯ ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗಿ ಧರಣಿ ನಡೆಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ನೀರಾವರಿ ಸಚಿವರಾಗಲೀ, ಜಿಲ್ಲಾಧಿಕಾರಿ ಅಥವಾ ನೀರಾವರಿ ಇಲಾಖೆಯ ಅಧಿಕಾರಿಗಳಾಗಲೀ ಧರಣಿ ಸ್ಥಳಕ್ಕೆ ಬಂದು ರೈತರ ಬೇಡಿಕೆಯನ್ನು ಆಲಿಸದೇ ಇರುವುದು ರೈತರ ಬಗ್ಗೆ ಸರ್ಕಾರಕ್ಕೆ ಇರುವ ಅನಾದರವನ್ನು ತೋರಿಸುತ್ತಿದೆ. ಹೀಗಾಗಿ ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ರಾಜ್ಯ ಕಾಡುಗೊಲ್ಲ ಸಮಾಜದ ಅಧ್ಯಕ್ಷ ರಾಜಣ್ಣ ಮಾತನಾಡಿ, ‘ಹಿರಿಯೂರು ತಾಲ್ಲೂಕಿನಲ್ಲಿ ಕಲ್ಲುವಳ್ಳಿ ಭಾಗ ತುಂಬಾ ಹಿಂದುಳಿದಿದೆ. ಮಳೆ ಕಡಿಮೆಯಾಗಿ ಕೆರೆಗಳು ಬತ್ತಿರುವ ಕಾರಣ ಅಂತರ್ಜಲ ಕುಸಿದಿದೆ. ಸಾವಿರಾರು ಅಡಿ ಕೊರೆಯಿಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ, ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ವಾಣಿವಿಲಾಸದ ನೀರು ಕೇಳುತ್ತಿರುವುದು ನ್ಯಾಯಸಮ್ಮತವಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಕೂಡಲೇ ನೀರು ಹರಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ.ಪಾಪಣ್ಣ, ರೈತ ಮುಖಂಡ ಕನ್ಯಪ್ಪ, ಅಶ್ವತ್ಥಪ್ಪ, ಚಂದ್ರಪ್ಪ, ಎಂ.ಆರ್.ವೀರಣ್ಣ, ನಟರಾಜ್, ಜಯರಾಮಣ್ಣ ಮಾತನಾಡಿದರು.
ಸಭೆಯಲ್ಲಿ ಕೆ.ಆರ್.ಹಳ್ಳಿ ರಾಜಣ್ಣ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹೇಶ್, ನಾಗೇಂದ್ರಪ್ಪ, ವಿಶ್ವನಾಥ್, ಕುಮಾರ್, ಈರಣ್ಣ, ಮಾರಣ್ಣ, ವಾಜಿದ್, ಕಲೀಮ್, ಬಸವರಾಜ್, ಮಂಜುನಾಥ್, ರಾಮಕೃಷ್ಣ, ಸುರೇಶ್, ದೇವೇಗೌಡ, ಕೆಂಚಪ್ಪ, ರಾಜಣ್ಣ, ಶಶಿಧರ್, ಗೋಪಾಲಪ್ಪ, ತಿಮ್ಮಾರೆಡ್ಡಿ, ಬಿ.ಆರ್.ರಂಗಸ್ವಾಮಿ, ತಿಮ್ಮಣ್ಣ, ಸಣ್ಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.