ADVERTISEMENT

ಹಿರಿಯೂರು: ಶೌಚಾಲಯಗಳಿಗೆ ಚಿತ್ರಕಲೆಯ ಸ್ಪರ್ಶ

ಸುವರ್ಣಾ ಬಸವರಾಜ್
Published 1 ಜನವರಿ 2024, 7:28 IST
Last Updated 1 ಜನವರಿ 2024, 7:28 IST
ಹಿರಿಯೂರಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಗರಸಭೆಯಿಂದ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ  ವರ್ಣಚಿತ್ರಗಳಿಂದ ಗಮನ ಸೆಳೆಯುತ್ತಿದೆ
ಹಿರಿಯೂರಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಗರಸಭೆಯಿಂದ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ  ವರ್ಣಚಿತ್ರಗಳಿಂದ ಗಮನ ಸೆಳೆಯುತ್ತಿದೆ   

ಹಿರಿಯೂರು: ನಗರದಲ್ಲಿ ಶೌಚಾಲಯ ಇಲ್ಲ, ಇದ್ದರೂ ಸರಿಯಿಲ್ಲ ಎಂಬ ದೂರುಗಳು ಸದ್ಯದಲ್ಲೇ ಕೊನೆಯಾಗಲಿವೆ. ಸ್ವಚ್ಛ ಶೌಚಾಲಯ ಅಭಿಯಾನ ಯೋಜನೆಯಡಿ ನಗರದ ಆರೇಳು ಕಡೆ ಶೌಚಾಲಯಗಳನ್ನು ನಿರ್ಮಿಸಲು ನಗರಸಭೆ ಮುಂದಾಗಿದೆ. ಇವುಗಳಿಗೆ ಬಣ್ಣ ಬಣ್ಣದ ಚಿತ್ತಾರ ಹಾಗೂ ಚಿತ್ರಕಲೆಯ ಸ್ಪರ್ಶ ನೀಡುತ್ತಿರುವುದು ವಿಶೇಷ. 

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಬಳಕೆಗೆ ಸಿದ್ಧವಾಗುತ್ತಿರುವ ಶೌಚಾಲಯದ ಗೋಡೆಗಳು ಬಣ್ಣದಿಂದ ಸಿಂಗಾರಗೊಂಡಿವೆ. ಒಡಿಎಫ್ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ಒಳ ಹಾಗೂ ಹೊರಗಿನ ಗೋಡೆಗಳ ಮೇಲೆ ಕಲಾವಿದರು ನಾಡಿನ ಸಂಸ್ಕೃತಿ, ಕಲೆ ಬಿಂಬಸುವ ಚಿತ್ರಗಳನ್ನು ರಚಿಸುವ ಕೆಲಸದಲ್ಲಿ ತೊಡಗಿದ್ದಾರೆ. 

ಈ ಶೌಚಾಲಯದಲ್ಲಿ ಪುರುಷರಿಗೆ ಐದು ಹಾಗೂ ಮಹಿಳೆಯರಿಗೆ ನಾಲ್ಕು ಶೌಚ ಕೋಣೆಗಳಿವೆ. ಪುರುಷರಿಗೆ ನಾಲ್ಕು ಮೂತ್ರಾಲಯದ ವ್ಯವಸ್ಥೆ ಮಾಡಲಾಗಿದೆ. 

ADVERTISEMENT

ಸಾರ್ವಜನಿಕ ಆಸ್ಪತ್ರೆ ಆವರಣ, ನೆಹರೂ ಮೈದಾನ, ಗಾಂಧಿವೃತ್ತದಲ್ಲಿ ಟಿಎಸ್‌ಟಿ ವಾಣಿಜ್ಯ ಮಳಿಗೆಗೆ ಹೊಂದಿಕೊಂಡಿರುವ ಜಾಗ, ನೆಹರೂ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯಗಳಿಗೂ ಹೊಸರೂಪ ನೀಡಲು ಉದ್ದೇಶಿಸಲಾಗಿದೆ. 

ಗೌರಿಬಿದನೂರಿನ ಶುಭಂ ಇಂಟರ್‌ ನ್ಯಾಷನಲ್ ಸೋಷಿಯಲ್ ಟ್ರಸ್ಟ್ ಸಂಸ್ಥೆಯು ಶೌಚಾಲಯಗಳ ನಿರ್ವಹಣೆ ಗುತ್ತಿಗೆ ಪಡೆದಿದೆ. ಇವೆಲ್ಲವೂ ಪಾವತಿಸಿ, ಬಳಸುವ ಎಲ್ಲ ಶೌಚಾಲಯಗಳಾಗಿವೆ.

‘ಪ್ರವಾಸಿ ಮಂದಿರದ ಸಮೀಪ ಚಳ್ಳಕೆರೆ ರಸ್ತೆಯಲ್ಲಿ ಅಪೂರ್ಣಗೊಂಡಿದ್ದ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ವೇದಾವತಿ ಬಡಾವಣೆಯಲ್ಲಿ ₹18 ಲಕ್ಷ ವೆಚ್ಚದಲ್ಲಿ ಮತ್ತು ಪ್ರಧಾನ ರಸ್ತೆಯಲ್ಲಿ ₹30 ಲಕ್ಷ ವೆಚ್ಚದಲ್ಲಿ  (ಆಸ್ಪಿರೇಷನ್ ಟಾಯ್ಲೆಟ್) ಶೌಚಾಲಯ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮಗಿದಿದೆ’ ಎಂದು ನಗರಸಭೆ ಪೌರಾಯುಕ್ತ ಎಚ್. ಮಹಾಂತೇಶ್ ತಿಳಿಸಿದ್ದಾರೆ. 

ರಸ್ತೆ ಸಾರಿಗೆ ಸಂಸ್ಥೆಯ ನಿಲ್ದಾಣದಿಂದ ಚಳ್ಳಕೆರೆ ರಸ್ತೆಯವರೆಗೆ ಏಳೆಂಟು ಶೌಚಾಲಯ ನಿರ್ಮಿಸುತ್ತಿರುವ ಕಾರಣಕ್ಕೆ ಇನ್ನುಮುಂದೆ ನಗರಕ್ಕೆ ಬರುವ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹಿರಿಯೂರು ನಗರವನ್ನು ಬಯಲು ಶೌಚಮುಕ್ತ ನಗರವನ್ನಾಗಿಸುವ ಉದ್ದೇಶವಿದೆ. ಹೊಸರೂಪ ಪಡೆದಿರುವ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಶೌಚಾಲಯ ನಿರ್ವಹಣೆ ಮಾಡುವವವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು
ಎಚ್. ಮಹಾಂತೇಶ್ ಪೌರಾಯುಕ್ತ 
ಸಂಸ್ಕೃತಿ ಅನಾವರಣ
ನಾಡಿನ ಸಂಸ್ಕೃತಿ ಕಲೆ ಬಿಂಬಸುವ ವರ್ಣಚಿತ್ರಗಳನ್ನು ಶೌಚಾಲಯದ ಗೋಡೆಗಳ ಮೇಲೆ ರಚಿಸಲಾಗುತ್ತಿದೆ. ಯಕ್ಷಗಾನ ಜನಪದ ನೃತ್ಯ ಸಂಗೀತ ಪರಂಪರೆ ಹಳ್ಳಿ ಸೊಗಡು ದೇವರು ಯತಿಗಳು ದೇಶ ಹಾಗೂ ನಾಡಿನ ಹಲವು ಸಂಸ್ಕೃತಿಯನ್ನು ಬಿಂಬಿಸುವ ನಾನಾ ರೀತಿಯ ಚಿತ್ರಗಳನ್ನು ಗೋಡೆಗಳಲ್ಲಿ ಚಿತ್ರಸಲಾಗುತ್ತಿದೆ. ರಸ್ತೆಯಲ್ಲಿ ಸಂಚರಿಸುವವರು ಕ್ಷಣಹೊತ್ತು ನಿಂತು ನೋಡಿ ಹೋಗುತ್ತಿದ್ದಾರೆ. ಇದಕ್ಕೆ ಸಾರ್ವಜನಕರಿಂದ ಶ್ಲಾಘನೆ ವ್ಯಕ್ತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.