ADVERTISEMENT

ಪರಶುರಾಂಪುರ: ಸೋಮವಾರದ ಸಂತೆಗೆ ಬೇಕಿದೆ ಕಾಯಕಲ್ಪ

ತಿಮ್ಮಯ್ಯ .ಜೆ ಪರಶುರಾಂಪುರ
Published 12 ಏಪ್ರಿಲ್ 2022, 6:47 IST
Last Updated 12 ಏಪ್ರಿಲ್ 2022, 6:47 IST
ಪರಶುರಾಪುರದಲ್ಲಿ ಸೋಮವಾರ ನಡೆದ ‌ಸಂತೆಯ ಒಂದು ನೋಟ.
ಪರಶುರಾಪುರದಲ್ಲಿ ಸೋಮವಾರ ನಡೆದ ‌ಸಂತೆಯ ಒಂದು ನೋಟ.   

ಪರಶುರಾಂಪುರ: ಗ್ರಾಮದ ಮುಖ್ಯ ವೃತ್ತದ ಪಕ್ಕದಲ್ಲೇ ಇರುವ ಸಂತೆ ಮೈದಾನ ವಿಶಾಲವಾಗಿದೆ. ಅದರೂ ಮೂಲ ಸೌಲಭ್ಯ ಸಮಸ್ಯೆಗಳು ಮಾತ್ರ ದಶಕಗಳಿಂದ ಪರಿಹಾರವಾಗಿಲ್ಲ.

–ಇದು ಇಲ್ಲಿನ ಸೋಮವಾರಸಂತೆಯ ಪರಿಸ್ಥಿತಿ. ಜಿಲ್ಲೆಯಲ್ಲೇ ಅತಿದೊಡ್ಡ ಹೋಬಳಿ ಕೇಂದ್ರವಾದ ಪರಶುರಾಂಪುರದಲ್ಲಿ ಸೋಮವಾರ ನಡೆಯುವ ಸಂತೆಗೆ ಸುತ್ತಮುತ್ತಲ ಚಿಕ್ಕಚೆಲ್ಲೂರು, ಓಬನಹಳ್ಳಿ, ದೊಡ್ಡಚೆಲ್ಲೂರು ಬೀರನಹಳ್ಳಿ,ಪಟ್ಲೋರಹಳ್ಳಿ, ಚೌಳೂರು, ಕೊರ್ಲಕುಂಟೆ ಸೇರಿ 40 ಹಳ್ಳಿಗಳು ಹಾಗೂ ನೆರೆ ಆಂಧ್ರಪ್ರದೇಶದ ಹಳ್ಳಿಗಳಿಂದಲೂ ಜನ ಇಲ್ಲಿಗೆ ಜನ ಬರುತ್ತಾರೆ. ಆದರೆ ಸಂತೆಗೆ ಬರುವ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ನೆರಳಿನ ವ್ಯವಸ್ಥೆ ಎಲ್ಲವೂ ಇಲ್ಲಿ ಗಗನ ಕುಸುಮವಾಗಿವೆ.

ಈ ಹಿಂದೆ ಶಾಲೆಯ ಅವರಣದಲ್ಲಿ ನಡೆಯುತ್ತಿದ್ದ ಸಂತೆಯನ್ನು 15 ವರ್ಷಗಳ ಹಿಂದೆ ಸುಧಾಕರ ಅವರು ಶಾಸಕರಾದ ಮೇಲೆ ಮುಖ್ಯ ವೃತ್ತದ ಪಕ್ಕದಲ್ಲಿ ವಿಶಾಲ ಜಾಗದಲ್ಲಿ ಸಂತೆ ಮೈದಾನ ಮಾಡಿದರು. ಇಂದಿಗೂ ಅದನ್ನು ‘ಸುಧಾಕರ ಸಂತೆ ಮೈದಾನ’ ಎಂದೇ ಕರೆಯುತ್ತಾರೆ. ಸಂತೆ ಮೈದಾನ ವಿಶಾಲವಾಗಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಜನರು, ವಾಹನ ಸವಾರರು ಹಾಗೂ ಆಟೊ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ.

ADVERTISEMENT

ಸಂತೆಯಲ್ಲಿ ಮೊಬೈಲ್ ಕಳ್ಳತನ:

‘ವಾರದ ಸಂತೆಯಲ್ಲಿ ಪ್ರತಿವಾರ ಮೊಬೈಲ್ ಕಳ್ಳತನ ನಡೆಯುತ್ತಲೇ ಇರುತ್ತದೆ. ನೆರೆಯ ಆಂಧ್ರಪ್ರದೇಶದ ಚಿಕ್ಕ ಹುಡುಗರ ಗ್ಯಾಂಗ್ ಸಂತೆಗೆ ಬರುವವರ ಗಮನ ಬೇರೆ ಕಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿರುವುದು ಪೊಲೀಸ್ ಇಲಾಖೆಗೂ ಗೊತ್ತಾದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂಬುದು ಇಲ್ಲಿನ ಸಾರ್ವಜನಿಕ ದೂರು.

ಬಿಸಿಲು-ಮಳೆಗೆ ಹೈರಾಣದ ಸಂತೆಯ ವ್ಯಾಪಸ್ಥರು:

‘ಚಳ್ಳಕೆರೆ ತಾಲ್ಲೂಕು ಅಂದರೆ ಬಿಸಿಲು. ಹೆಚ್ಚಿನ ಬಿಸಿಲು ಬಂತೆಂದರೆ ವ್ಯಾಪಾರಕ್ಕೆ ಹೋಗುವುದೇ ಬೇಡ ಎಂಬ ಪರಿಸ್ಥಿತಿ ಇದೆ. ಆದರೆ ವ್ಯಾಪಾರ ಮಾಡದಿದ್ದರೆ ಜೀವನ ನಿರ್ವಹಣೆ ಕಷ್ಟ ಎಂಬುದು ವ್ಯಾಪಾರಿಗಳ ಅಳಲು. ಬಿರುಬಿಸಿಲಿನ ತಾಪ ಕಡಿಮೆ ಮಾಡಲು ಯಾವುದೇ ನೆರಳಿನ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ಮಳೆ ಸುರಿದರೆ ನೀರೆಲ್ಲಾ ಸಂತೆ ಮೈದಾನಕ್ಕೆ ಬರುತ್ತದೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ನೆಲವಳಿ ಸುಂಕ ಮಾತ್ರ ₹30ರಿಂದ ₹ 40 ಪಡೆಯುತ್ತಾರೆ. ಗ್ರಾಮ ಪಂಚಾಯಿತಿಯವರು ವರ್ಷಕ್ಕೆ ₹2.50 ಲಕ್ಷದಿಂದ ₹ 3ಲಕ್ಷದವರೆಗೆ ಸಂತೆ ಹರಾಜು ಮಾಡುತ್ತಾರೆ. ಅದರೆ ಸೌಲಭ್ಯವನ್ನು ಒದಗಿಸುತ್ತಿಲ್ಲ’ ಎಂಬುದು ಇಲ್ಲಿನ ವ್ಯಾಪರಸ್ಥರ ಅಕ್ರೋಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.