ಶ್ರೀರಾಂಪುರ: ಇವರ ತೆಂಗು ಮತ್ತು ಅಡಿಕೆ ತೋಟದೊಳಗೆ ಪ್ರವೇಶಿಸುವಾಗ ಮಲೆನಾಡು ಪ್ರದೇಶದಲ್ಲಿನ ಹಸಿರು ತೋಟದೊಳಗೆ ಓಡಾತ್ತಿರುವಂತಹ ಹಿತಾನುಭವ. ಮಲೆನಾಡಿನಲ್ಲಿ ಹಾಗೂ ಕೇರಳದಲ್ಲಿ ಹೆಚ್ಚಾಗಿ ಬೆಳೆಯುವ ತೆಂಗು, ಅಡಿಕೆ ಹಾಗೂ ಸಿಲ್ವರ್ ಓಕ್ ಮರಗಳೊಂದಿಗೆ ಕರಿಮೆಣಸು (ಕಾಳು ಮೆಣಸು) ಬಳ್ಳಿಯೂ ಈ ತೋಟದಲ್ಲಿ ರಾರಾಜಿಸುತ್ತಿದೆ.
ಇದು ಹೋಬಳಿಯ ತಂಡಗ ಗ್ರಾಮದ ಮುದ್ದಪ್ಪ ಅವರ ತೋಟದ ಸೊಬಗು. ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆದು ಯಶಸ್ವಿಯಾದ ಬೆಳೆಗಾರರಲ್ಲಿ ಇದೇ ಮುದ್ದಪ್ಪ ಅವರೂ ಪ್ರಮುಖರು. ದಾಳಿಂಬೆ ಬೆಳೆಗೆ ರೋಗಬಾಧೆ ಹೆಚ್ಚಾಗಿ ದರ ಕುಸಿತ ಕಂಡ ಪರಿಣಾಮವಾಗಿ ಅದನ್ನು ಕೈಬಿಟ್ಟು ಪಣಿಯೂರು-1 ತಳಿಯ ಕರಿಮೆಣಸಿನತ್ತ ಇವರು ಆಕರ್ಷಿತರಾಗಿದ್ದಾರೆ.
‘ಕೊಪ್ಪ ಸಮೀಪ ಇರುವ ಕೇಂದ್ರ ಸಾಂಬಾರು ಮಂಡಳಿಯ ಫಾರಂನಿಂದ 2,500 ಸಸಿ ತಂದು ನೆಡಲಾಗಿದೆ. ಹಾಲಿ ಇರುವ ಅಡಿಕೆ ಹಾಗೂ ಸಿಲ್ವರ ಓಕ್ ಮರದ ಬುಡದಿಂದ ಒಂದೂವರೆ ಅಡಿ ದೂರದಲ್ಲಿ, ತೆಂಗಿನ ಮರದ ಬುಡದಿಂದ ಎರಡೂವರೆ ಅಡಿ ದೂರದಲ್ಲಿ ಒಂದೂವರೆ ಅಡಿ ಆಳ ಮತ್ತು ಸುತ್ತಳತೆಯ ಗುಂಡಿ ತೆಗೆಯಲಾಗಿದೆ. ಅದಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ತರಗೆಲೆಗಳ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚಿ 15 ದಿನಗಳ ನಂತರ ಕರಿಮೆಣಸಿನ ಸಸಿಯನ್ನು ನೆಡಲಾಗಿದೆ. ಬಳ್ಳಿಯನ್ನು ಅಡಿಕೆ ಮರಕ್ಕೆ ಹಬ್ಬುವಂತೆ ಬಿಡಬೇಕು. ತೆಂಗಿನ ಮರಕ್ಕೆ ಹಬ್ಬಿಸುವುದರಿಂದ ಅಳಿಲು ಕಾಟವೂ ಇರುವುದಿಲ್ಲ. ಪ್ರತಿ ವರ್ಷ ಜನವರಿ- ಫೆಬ್ರುವರಿ ತಿಂಗಳಲ್ಲಿ ತೆನೆ ಕಟಾವು ಮಾಡಲಾಗುತ್ತದೆ. ಮನೆಯಲ್ಲಿರುವ ಯಂತ್ರದ ಮೂಲಕ ತೆನೆಯಿಂದ ಕಾಳು ಬೇರ್ಪಡಿಸಿ ಕಾಳನ್ನು ಬಿಸಿ ನೀರಿನಲ್ಲಿ ಒಂದು ಬಾರಿ ಅದ್ದಿ ತೆಗೆದು ಎರಡು ದಿನ ಬಿಸಿಲಿನಲ್ಲಿ ಒಣಗಿಸಿಟ್ಟರೆ ಸಾಕು ಮಾರುಕಟ್ಟೆಗೆ ಕೊಂಡೊಯ್ಯಬಹುದು’ ಎನ್ನುತ್ತಾರೆ ರೈತ ಮುದ್ದಪ್ಪ.
8 ವರ್ಷಗಳ ಹಿಂದೆ ಕರಿಮೆಣಸಿನ ಬಳ್ಳಿ ನಾಟಿ ಮಾಡಿ ಸತತವಾಗಿ ನಾಲ್ಕು ವರ್ಷಗಳ ಕಾಲ ಅದನ್ನು ಪೋಷಣೆ ಮಾಡಿ ಈಗ ನಾಲ್ಕು ವರ್ಷಗಳಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
‘ಆರಂಭದಲ್ಲಿ ಒಂದು ಸಸಿಯಿಂದ 100 ಗ್ರಾಂಗಳಷ್ಟು ಕರಿಮೆಣಸು ಬಿಡುತ್ತದೆ. ನಂತರದ ವರ್ಷಗಳಲ್ಲಿ 400 ಗ್ರಾಂ ದೊರೆಯುತ್ತ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತದೆ. ಪ್ರತಿ ಕ್ವಿಂಟಲ್ ಕರಿಮೆಣಸಿನ ಧಾರಣೆ ಪ್ರಸ್ತುತ ₹ 48,000 ದಿಂದ
₹ 52,000 ದವರೆಗೆ ಇದೆ. ಈ ಬಾರಿ 17 ಕ್ವಿಂಟಲ್ ಇಳುವರಿ ಬಂದಿದ್ದು ₹ 8 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ’ ಎನ್ನುತ್ತಾರೆ ಮುದ್ದಪ್ಪನವರೊಂದಿಗೇ ಕೃಷಿಯಲ್ಲಿ ತೊಡಗಿರುವ ಅವರ ಪುತ್ರ ಯರಗುಂಟಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.