ADVERTISEMENT

ವಚನ ಸಾಹಿತ್ಯ ಜಗತ್ತಿಗೆ ಪರಿಚಯಿಸಿದ ಮಹಾನ್‌ ವ್ಯಕ್ತಿ ಫ.ಗು.ಹಳಕಟ್ಟಿ: ಶಿವಪ್ರಸಾದ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 13:53 IST
Last Updated 2 ಜುಲೈ 2024, 13:53 IST
<div class="paragraphs"><p>ಹಿರಿಯೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮವನ್ನು ಉಪ ತಹಶೀಲ್ದಾರ್ ತಿಪ್ಪೇಸ್ವಾಮಿ ಉದ್ಘಾಟಿಸಿದರು </p></div>

ಹಿರಿಯೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮವನ್ನು ಉಪ ತಹಶೀಲ್ದಾರ್ ತಿಪ್ಪೇಸ್ವಾಮಿ ಉದ್ಘಾಟಿಸಿದರು

   

ಹಿರಿಯೂರು: ‘ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನ ಸಾಹಿತ್ಯ ಸಂಗ್ರಹಣೆ, ಸಂಶೋಧನೆ, ಮುದ್ರಣ ಕಾರ್ಯಕ್ಕೆ ಮುಂದಾಗದೇ ಹೋಗಿದ್ದರೆ ಜಗತ್ತಿಗೆ ಅಪರೂಪದ ಮೌಲ್ಯಗಳಿರುವ ವಚನ ಸಾಹಿತ್ಯ ಸಂಪತ್ತು ಪರಿಚಯವಾಗುತ್ತಿರಲಿಲ್ಲ’ ಎಂದು ನಿವೃತ್ತ ವಿದ್ಯಾಧಿಕಾರಿ ಟಿ.ಶಿವಪ್ರಸಾದ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.

ADVERTISEMENT

‘ವಕೀಲಿ ವೃತ್ತಿ ಆರಂಭಿಸಿದ್ದ ಹಳಕಟ್ಟಿಯವರು ಸ್ನೇಹಿತರೊಬ್ಬರ ಮನೆಯಲ್ಲಿ ಕಂಡ ತಾಡೋಲೆಗಳ ಕಟ್ಟು ನೋಡಿದ ನಂತರ ವಚನ ಸಾಹಿತ್ಯದ ಹಸ್ತಪ್ರತಿಗಳ ಸಂಗ್ರಹಕ್ಕೆ ಮುಂದಾದರು. ಸ್ವಂತ ಮುದ್ರಣಾಲಯದಲ್ಲಿ ವಚನಗಳನ್ನು ಅಚ್ಚು ಹಾಕಿ, ತಮ್ಮದೇ ಸಂಪಾದಕತ್ವದ ಶಿವಾನುಭವ, ನವಕರ್ನಾಟಕ ನಿಯತ ಕಾಲಿಕೆಗಳ ಮೂಲಕ ವಚನಗಳು ಜನರ ಗಮನ ಸೆಳೆಯುವಂತೆ ಮಾಡಿದರು. ವಿಜಯಪುರದಲ್ಲಿ ಬಿಎಲ್‌ಡಿ ಶಿಕ್ಷಣ ಸಂಸ್ಥೆ ಆರಂಭಿಸಿ ಸಾವಿರಾರು ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಿದರು. ಸಿದ್ದೇಶ್ವರ ಬ್ಯಾಂಕ್ ಆರಂಭಿಸಿ ಜನರಲ್ಲಿ ಆರ್ಥಿಕ ವ್ಯವಹಾರ ನಡೆಸುವ ಬಗ್ಗೆ ಕಲಿಸಿಕೊಟ್ಟರು. ಬರ ಆವರಿಸಿದ್ದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜನರ ನೋವಿಗೆ ಸ್ಪಂದಿಸಿದ್ದರು’ ಎಂದು ಅವರು ವಿವರಿಸಿದರು.

‘ಸಮಗ್ರ ವಚನ ಸಾಹಿತ್ಯ ಸಂಪುಟ ಹೊರತರಲು ಹಳಕಟ್ಟಿಯವರು 50 ವರ್ಷ ಅಹರ್ನಿಶಿ ಶ್ರಮಿಸಿದ್ದರು. ವಿಜಾಪುರ ನಗರಸಭೆ ಸದಸ್ಯರಾಗಿ, ಮುಂಬಯಿ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಒಂದು ಸಂಘ– ಸಂಸ್ಥೆ ಮಾಡಬಹುದಾದ ಕೆಲಸಗಳನ್ನು ಹಳಕಟ್ಟಿಯವರು ಏಕಾಂಗಿಯಾಗಿ ಸಾಧಿಸಿದ್ದರು. ವಚನ ಸಾಹಿತ್ಯ ಇರುವವರೆಗೆ ಹಳಕಟ್ಟಿಯವರ ಹೆಸರು ಇರುತ್ತದೆ’ ಎಂದು ಶಿವಪ್ರಸಾದ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ತಹಶೀಲ್ದಾರ್ ತಿಪ್ಪೇಸ್ವಾಮಿ ವಹಿಸಿದ್ದರು. ಶಶಿಕಲಾ ರವಿಶಂಕರ್, ಸರ್ವಮಂಗಳಾ, ತ್ರಿವೇಣಿ, ಶ್ರೀರಂಗಮ್ಮ, ರತ್ನಮ್ಮ, ಪಿ.ಡಿ.ಪೂಜಾ, ಶ್ರೀದೇವಿ, ಟಿ.ಎಸ್.ಶಶಿಧರ, ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.