ADVERTISEMENT

ಚಿತ್ರದುರ್ಗ: ರೇಣುಕಸ್ವಾಮಿ ಅಪಹರಣಕ್ಕೆ ಬಳಸಿದ್ದ ಕಾರು ಜಪ್ತಿ

ಚಿತ್ರದುರ್ಗದ ನಾಲ್ವರು ಆರೋಪಿಗಳ ಮನೆಯಲ್ಲಿ ಪೊಲೀಸರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಚಿತ್ರದುರ್ಗದ ಮೆದೆಹಳ್ಳಿ ಬಡಾವಣೆಯಲ್ಲಿರುವ 4ನೇ ಆರೋಪಿ ರಾಘವೇಂದ್ರ ಮನೆಗೆ ಪೊಲೀಸರು ಬಂದಾಗ ಸೇರಿದ್ದ ಜನ
ಚಿತ್ರದುರ್ಗದ ಮೆದೆಹಳ್ಳಿ ಬಡಾವಣೆಯಲ್ಲಿರುವ 4ನೇ ಆರೋಪಿ ರಾಘವೇಂದ್ರ ಮನೆಗೆ ಪೊಲೀಸರು ಬಂದಾಗ ಸೇರಿದ್ದ ಜನ   

ಚಿತ್ರದುರ್ಗ: ರೇಣುಕಸ್ವಾಮಿಯನ್ನು ಜೂನ್‌ 8ರಂದು ನಗರದಿಂದ ಬೆಂಗಳೂರಿಗೆ ಕರೆದೊಯ್ದಿದ್ದ ಇಟಿಯೋಸ್‌ ಕಾರನ್ನು  ಜಪ್ತಿ ಮಾಡಿದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭಾನುವಾರ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದರು.

ಶನಿವಾರ ರಾತ್ರಿಯೇ ನಗರಕ್ಕೆ ಬಂದಿದ್ದ ಪೊಲೀಸರು, ಭಾನುವಾರ ಬೆಳಿಗ್ಗೆ ಪ್ರಕರಣದ 8ನೇ ಆರೋಪಿ, ತಾಲ್ಲೂಕಿನ ಐನಳ್ಳಿ ಕುರುಬರಕಟ್ಟೆ ಗ್ರಾಮದ ಚಾಲಕ ರವಿ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದರು. ಮನೆ ಮುಂದೆಯೇ ನಿಂತಿದ್ದ ಇಟಿಯೋಸ್ ಕಾರನ್ನು ಪರಿಶೀಲಿಸಿದರು. ಕಾರಿನ ಸುತ್ತ ಬೆಡ್‌ಶೀಟ್‌, ಕಂಬಳಿ ಹಿಡಿದು ಗೋಪ್ಯತೆ ಕಾಪಾಡಿ ಪರಿಶೀಲಿಸಿ ನಂತರ ಜಪ್ತಿ ಮಾಡಿದರು. ಬೆರಳಚ್ಚು ತಜ್ಞರೂ ಪರಿಶೀಲಿಸಿದರು.

ಪ್ರರಕಣದ 4ನೇ ಆರೋಪಿ, ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ರಾಘವೇಂದ್ರ ಜೊತೆ ಬಂದು ಪೊಲೀಸರು ಜೂನ್‌ 14ರಂದೇ ಮೊದಲ ಹಂತದ ಸ್ಥಳ ಮಹಜರು ನಡೆಸಿದ್ದರು. ನಂತರ ಪ್ರಕರಣದ ಇತರ ಮೂವರು ಆರೋಪಿಗಳು  ಶರಣಾದ ಹಿನ್ನೆಲೆಯಲ್ಲಿ ಎಲ್ಲರ ಮನೆಗೂ ಭೇಟಿ ನೀಡಿ ಮಹಜರು ನಡೆಸಿದರು.

ADVERTISEMENT

ಚಾಲಕ ರವಿ ಮನೆಯ ಒಳಗೂ ತೆರಳಿದ ಪೊಲೀಸರು ಪತ್ನಿ ಕವಿತಾ ಅವರನ್ನು ಪ್ರಶ್ನಿಸಿದರು. ನಟ ದರ್ಶನ್‌ ಅವರಿಂದ ₹ 5 ಲಕ್ಷ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಕಾರಣ ಮನೆಯಲ್ಣಿ ಹಣಕ್ಕಾಗಿ ಹುಡುಕಾಟ ನಡೆಸಿದರು. ನಂತರ 6ನೇ ಆರೋಪಿ, ಮಹವೀರ ನಗರದ ಜಗದೀಶ್‌ ಮನೆಯಲ್ಲಿ ತಪಾಸಣೆ ನಡೆಸಿದರು. ಆರೋಪಿಗೆ ಸೇರಿದ ಆಟೊ ಜಪ್ತಿ ಮಾಡಿದರು. 7ನೇ ಆರೋಪಿ ಅನುಕುಮಾರ್‌ ಮನೆಗೂ ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದರು. ಸ್ಥಳೀಯ ಪೊಲೀಸರ ಬಿಗಿಭದ್ರತೆ ನಡುವೆ ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು.

ಸ್ವಾಮೀಜಿ ಆಕ್ರೋಶ: ವಿಆರ್‌ಎಸ್‌ ಬಡಾವಣೆಯ ರೇಣುಕಸ್ವಾಮಿ ಮನೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಘಟನೆಯನ್ನು ಕುರಿತು ಆಕ್ರೋಶ ವ್ಯಕ್ತಪಡಿಸಿದರು.

‘ಈಚೆಗೆ ಹತ್ಯೆಯಂತಹ ಘಟನೆಗಳು ಹೆಚ್ಚುತ್ತಿವೆ. ಹುಬಳ್ಳಿಯಲ್ಲಿ ನೇಹಾ, ಅಂಜಲಿ ಕೊಲೆ ಘಟನೆಗಳು ನಡೆದಿವೆ. ಮುಗ್ಧರ ಜೀವಗಳು ಬಲಿಯಾಗುತ್ತಿರುವುದು ದುರದೃಷ್ಟಕರ. ಸಿನಿಮೀಯ  ರೀತಿಯಲ್ಲಿ ರೇಣುಕಸ್ವಾಮಿಯನ್ನು ಕೊಲೆ ಮಾಡಿರುವುದು ಖಂಡನೀಯ. ಈ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ’ ಎಂದರು.

ರೇಣುಕಸ್ವಾಮಿ ಪೋಷಕರಾದ ಕಾಶಿನಾಥಯ್ಯ ಶಿವನಗೌಡರ್‌ ಹಾಗೂ ರತ್ನಪ್ರಭಾ ದಂಪತಿ ಕಣ್ಣೀರು ಹಾಕುತ್ತಾ ಸ್ವಾಮೀಜಿಯ ಪಾದಪೂಜೆ ಮಾಡಿದರು.

ಆರೋಪಿ ಮನೆಯಲ್ಲಿ ಚಿನ್ನ ನಗದು ಪತ್ತೆ

ಆರೋಪಿ ರಾಘವೇಂದ್ರ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ರೇಣುಕಸ್ವಾಮಿ ಕತ್ತಿನಲ್ಲಿದ್ದ ಚಿನ್ನದ ಸರ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಕೈಕಡಗ ಪತ್ತೆಯಾಗಿವೆ. ರಾಘವೇಂದ್ರ ಮನೆಯಲ್ಲಿ ಪರಿಶೀಲನೆ ನಡೆಸಲು ಶನಿವಾರ ರಾತ್ರಿಯೇ ಪೊಲೀಸರು ಪ್ರಯತ್ನಿಸಿದ್ದರು. ಆದರೆ ಮನೆಗೆ ಬೀಗ ಹಾಕಿದ್ದ ಕಾರಣ ಮನೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಭಾನುವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಪೊಲೀಸರು ಬಂದಾಗಲೂ ಮನೆಗೆ ಬೀಗ ಹಾಕಲಾಗಿತ್ತು. ಆರೋಪಿ ರಾಘವೇಂದ್ರ ಮೂಲಕವೇ ಆತನ ಪತ್ನಿ ಸಹನಾಗೆ ಕರೆ ಮಾಡಿಸಿ ಮನೆಗೆ ಕರೆಸಿ ಬೀಗ ತೆರೆಸಲಾಯಿತು. ಒಂದೂವರೆ ಗಂಟೆಗೂ ಹೆಚ್ಚುಕಾಲ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದರು.

ರಾಘವೇಂದ್ರ ಬೆಂಗಳೂರಿನಿಂದ ತಂದಿದ್ದ ₹ 10 ಲಕ್ಷ ನಗದು ಹಾಗೂ ರೇಣುಕಸ್ವಾಮಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ‘ರೇಣುಕಸ್ವಾಮಿ ಧರಿಸಿದ್ದ ಆಭರಣಗಳನ್ನು ರಾಘವೇಂದ್ರ ತೆಗೆದುಕೊಂಡಿದ್ದ. ಪತ್ನಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಹಣ ಹಾಗೂ ಆಭರಣಗಳನ್ನು ಕೊಟ್ಟು ಕಳುಹಿಸಿದ್ದ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.