ADVERTISEMENT

ಅರಸನ ಕೆರೆ; ಹೊರಕ್ಕೆ ಹರಿದ ಕಲುಷಿತ ನೀರು

ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ; ಸರಣಿ ಕೆರೆಗಳ ಒಡಲು ಸೇರಿದ ತ್ಯಾಜ್ಯ, ರೈತರ ಆಕ್ರೋಶ

ಎಂ.ಎನ್.ಯೋಗೇಶ್‌
Published 21 ನವೆಂಬರ್ 2024, 7:00 IST
Last Updated 21 ನವೆಂಬರ್ 2024, 7:00 IST
ಅರಸನಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರು ಹೊರಕ್ಕೆ ಹರಿದು ಹೋಗುತ್ತಿರುವುದು
ಅರಸನಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರು ಹೊರಕ್ಕೆ ಹರಿದು ಹೋಗುತ್ತಿರುವುದು   

ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಅರಸನ ಕೆರೆ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಮುಂದಾಗಿದ್ದು ಕೆರೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಆದರೆ, ಕೆರೆ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು ಶುದ್ಧೀಕರಿಸದೇ ತ್ಯಾಜ್ಯ ನೀರನ್ನೇ ಹೊರಗಿನ ಬಡಾವಣೆಗಳಿಗೆ, ಸರಣಿ ಕೆರೆಗಳಿಗೆ ಹರಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುರುಘಾ ಮಠದ ಮುಂಭಾಗ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಕೆರೆ ನೋಡುಗರಿಗೆ ಆಕರ್ಷಣೀಯವಾಗಿತ್ತು. ಆದರೆ, ನಗರದ ಹಲವು ಬಡಾವಣೆಗಳ ಕೊಳಚೆ ನೀರು ನೇರವಾಗಿ ಅರಸನ ಕೆರೆ ಸೇರುತ್ತಿದ್ದ ಕಾರಣ ಕೆರೆ ಕಲುಷಿತಗೊಂಡಿತ್ತು. ದೂರದಿಂದ ಆಕರ್ಷಣೀಯವಾಗಿ ಕಂಡರೂ ಹತ್ತಿರ ಬರುತ್ತಿದ್ದಂತೆ ದುರ್ವಾಸನೆ ಮೂಗಿಗೆ ಬಡಿಯುತ್ತಿತ್ತು. ಇತ್ತೀಚೆಗಂತೂ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ವಾಸನೆ ಹೆಚ್ಚಾಗಿತ್ತು.

ಅರಸನಕೆರೆ ಅಭಿವೃದ್ಧಿಗೊಳಿಸಿ ಸುಂದರ ತಾಣವನ್ನಾಗಿ ರೂಪಿಸುವ ಯೋಜನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ 2 ವರ್ಷಗಳ ‌ಹಿಂದೆಯೇ ರೂಪಿಸಿತ್ತು. ಆದರೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಯೋಜನೆಗೆ‌ ಮರುಜೀವ ಬಂದಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲು ಕುಡಾ ಮುಂದಾಗಿದೆ. ಆರಂಭಿಕವಾಗಿ ಕೆರೆಯಲ್ಲಿದ್ದ ನೀರನ್ನು ‌ಹೊರಕ್ಕೆ‌ ಹರಿಬಿಡಲಾಗುತ್ತಿದೆ.

ADVERTISEMENT

ಕಲುಷಿತಗೊಂಡಿದ್ದ‌ ತ್ಯಾಜ್ಯನೀರು ನಗರದ‌ ಮಠದ ಕುರುಬರಹಟ್ಟಿ ಬಡಾಬಣೆಯ ಮೂಲಕ ಮಲ್ಲಾಪುರ ಕೆರೆಯ ಒಡಲು ಸೇರುತ್ತಿದೆ.‌ ಅಷ್ಟೇ ಅಲ್ಲದೇ ಅರನಸರೆಕೆ‌, ಮಲ್ಲಾಪುರ ಕೆರೆ‌ಗಳ ಸರಣಿಯಲ್ಲೇ ಬರುವ ಗೋನೂರು ಕೆರೆ, ದ್ಯಾಮವ್ವನಹಳ್ಳಿ ಕೆರೆ, ಕಲ್ಲಹಳ್ಳಿ ಕೆರೆ, ಮಧುರೆ ಕೆರೆ, ರಾಣಿ ಕೆರೆ ಒಡಲಿಗೂ ಕೊಳಚೆ ನೀರು ಹರಿಯುತ್ತಿದೆ.

ಕೊಳಚೆ ನೀರನ್ನು ಸಂಸ್ಕರಿಸದೇ ಸರಣಿ ಕೆರೆಗಳಿಗೆ ಹರಿಸಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎಂ.ಕೆ.ಹಟ್ಟಿ ಬಡಾವಣೆಯ ಚರಂಡಿ, ತರೆದ ಕಾಲುವೆಗಳಲ್ಲಿ ಕೊಳಚೆ ನೀರು ಹರಿಯುತ್ತಿದ್ದು ರೋಗಭೀತಿ ಆರಂಭವಾಗಿದೆ. ದುರ್ವಾಸನೆಯಿಂದ ಜನರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

'ಕೊಳಚೆ ನೀರು ಶುದ್ಧೀಕರಣ ಮಾಡಲು ಸಾಕಷ್ಟು ಆಧುನಿಕ ವಿಧಾನಗಳಿದ್ದವು. ಯಾವುದೇ ಮುನ್ಸೂಚನೆ ನೀಡದೇ ಕೊಳಚೆ ನೀರನ್ನು ಹೊರಕ್ಕೆ ಬಿಡಲಾಗಿದೆ. ಕಾಲುವೆ ಬದಿಯ ಜಮೀನುಗಳಿಗೂ ಕೊಳಚೆ ಹರಿದು ಬೆಳೆ ಹಾಳಾಗುವ ಭೀತಿ ಇದೆ. ಒಂದು ಕೆರೆ ಅಭಿವೃದ್ಧಿಗಾಗಿ ನಾಲ್ಕೈದು ಕೆರೆಗೆ ಕೊಳಚೆ ಹರಿಸಲಾಗಿದೆ. ತ್ಯಾಜ್ಯ ನೀರಿನಿಂದ ಸರಣಿ ಕೆರೆಗಳಲ್ಲಿರುವ ಮೀನು ಸೇರಿ ಜಲಚರಗಳಿಗೆ ಅಪಾಯ ಎದುರಾಗಿದೆ' ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ್ ಆಕ್ರೋಶ ವ್ಯಕ್ತಪಡಿಸಿದರು.

38 ಎಕರೆ ವಿಸ್ತೀರ್ಣ ಹೊಂದಿರುವ ಅರಸನ ಕೆರೆಗೆ ಹಲವು ವರ್ಷಗಳಿಂದ ಜನವಸತಿ ಪ್ರದೇಶದ‌ ತ್ಯಾಜ್ಯ ಬಂದು ಸೇರುತ್ತಿದೆ. ಜೊತೆಗೆ ಬಯಲು ಶೌಚಾಲಯವಾಗಿಯೂ ಕೆರೆಯ ದಡ, ಆಸುಪಾಸಿನ ಪ್ರದೇಶ ಬಳಕೆಯಾಗುತ್ತಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಕೆರೆಯ ಶುದ್ಧೀಕರಣಕ್ಕೆ‌ ಅಧಿಕಾರಿಗಳು ಮುಂದಾಗಿಲ್ಲ ಎಂಬ ಆಕ್ರೋಶ ಸ್ಥಳೀಯರಲ್ಲಿದೆ.

2 ವರ್ಷದ ಹಿಂದೆ ಕುಡಾ ಕೆರೆ ಅಭಿವೃದ್ಧಿ ಯೋಜನೆ ರೂಪಿಸಿದಾಗ ಕೆರೆಯಲ್ಲಿ ಮೀನು ಸಾಕಣೆ ಮಾಡುತ್ತಿದ್ದ ಗುತ್ತಿಗೆದಾರರು ಕೋರ್ಟ್‌ನಿಂದ ನಿಷೇಧಾಜ್ಞೆ ತಂದಿದ್ದರು. ಈಚೆಗೆ ಕುಡಾ ಆಡಳಿತ ಮಂಡಳಿ ನಿಷೇಧಾಜ್ಞೆ ತೆರವುಗೊಳಿಸಲು ಯಶಸ್ವಿಯಾಗಿದ್ದು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

₹ 5 ಕೋಟಿಯಲ್ಲಿ ಅಭಿವೃದ್ಧಿ ಕಾಮಗಾರಿ

'ಪ್ರವಾಸಿ ತಾಣದ ರೂಪದಲ್ಲಿ ಅರಸನ ಕೆರೆ ಅಭಿವೃದ್ಧಿಗೊಳಿಸಲಾಗುವುದು. ಅದಕ್ಕಾಗಿ ₹ 5 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು ಟೆಂಡರ್ ‌ಪ್ರಕ್ರಿಯೆ ನಡೆಯುತ್ತಿದೆ' ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಹೇಳಿದರು. 'ಕೊಳಚೆ ನೀರು ಹರಿಸಿರುವ ಕಾರಣ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ರೈತರ ಸಮಸ್ಯೆ ಪರಿಹರಿಸಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.